-->
ಕೊಚ್ಚಿಯಲ್ಲಿ ಮಾಡೆಲ್ ಗಳ ದುರಂತ ಸಾವು ಪ್ರಕರಣ: ಡಿಜೆ ಪಾರ್ಟಿ ನಡೆದ ಹೊಟೇಲ್ ನಲ್ಲಿ ರಹಸ್ಯ ಕ್ಯಾಮರಾಗಳು ಪತ್ತೆ

ಕೊಚ್ಚಿಯಲ್ಲಿ ಮಾಡೆಲ್ ಗಳ ದುರಂತ ಸಾವು ಪ್ರಕರಣ: ಡಿಜೆ ಪಾರ್ಟಿ ನಡೆದ ಹೊಟೇಲ್ ನಲ್ಲಿ ರಹಸ್ಯ ಕ್ಯಾಮರಾಗಳು ಪತ್ತೆ

ಕೊಚ್ಚಿ: ಕೇರಳದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಮಾಡೆಲ್ ಗಳಿಬ್ಬರ ದುರ್ಮರಣ ಪ್ರಕರಣವು ಅಂತ್ಯ ಕಾಣದೆ ದಿನಕ್ಕೊಂದು ಹೊಸ ತಿರುವು ಪಡೆಯುತ್ತಲೇ ಇದೆ. ಪ್ರಕರಣದ ಸುತ್ತ ಆರಂಭದಿಂದಲೇ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿತ್ತು. ಮಾಡೆಲ್​ಗಳು ಡಿಜೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಹೋಟೆಲ್​ ಮಾಲಕನ ನಡೆ, ಅಪಘಾತಕ್ಕೀಡಾದ ಕಾರನ್ನು ಚೇಸ್​ ಮಾಡಿದ್ದ ಆಡಿ ಕಾರು, ಪ್ರಕರಣದ ಹಿಂದೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. ಆದರೆ, ಇದೊಂದು ಕೊಲೆಯಲ್ಲ, ಮದ್ಯದ ಅಮಲಿನಲ್ಲಿ ಸಂಭವಿಸಿರುವ ದುರ್ಘಟನೆ ಎಂದು ನಿಗೂಢತೆಗೆ ತೆರೆ ಎಳೆಯಲು ಪೊಲೀಸರು ಪ್ರಯತ್ನಿಸಿದ್ದರು. 

ಆದರೆ ಅಪಘಾತಕ್ಕೀಡಾದ ಕಾರು ಚಲಾಯಿಸಿದಾತನ ಹೇಳಿಕೆ ಹಾಗೂ ಹೋಟೆಲ್​ ಮಾಲಕನ ನಿಗೂಢ ನಡೆ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿತ್ತು. ಆದರೆ, ಇದೀಗ ಆರೋಪಿ ಡ್ರಗ್ಸ್​ ಪೆಡ್ಲರ್​ ಸೈಜು ಥಾಂಕಚನ್​ ಬಂಧನದ ಬಳಿಕ ಸಾಕಷ್ಟು ಮಹತ್ವದ ಮಾಹಿತಿಗಳು ಹೊರಬರುತ್ತಿವೆ. ಮಾಡೆಲ್​ಗಳಿದ್ದ ಕಾರನ್ನು ಆರೋಪಿ ಡ್ರಗ್ಸ್​ ಪೆಡ್ಲರ್​ ಸೈಜು​ ದುರುದ್ದೇಶದಿಂದ ಹಿಂಬಾಲಿಸಿದ್ದೆ ಅಪಘಾತಕ್ಕೆ ಕಾರಣ ಎಂದು ಕೊಚ್ಚಿಯ ಪೊಲೀಸ್​ ಆಯುಕ್ತ ಸಿ.ಎಚ್.ನಾಗರಾಜು ಹೇಳಿದ್ದಾರೆ.

ಇದೀಗ ಆತಂಕಕಾರಿ ವಿಚಾರವೊಂದು ಬಹಿರಂಗಗೊಂಡಿದೆ. ಅಪಘಾತಕ್ಕೂ ಮುನ್ನ ಕೊಚ್ಚಿ ನಂಬರ್​ 18 ಹೋಟೆಲ್​ನಲ್ಲಿ ಡಿಜೆ ಪಾರ್ಟಿ ನಡೆದಿತ್ತು. ಆ ಹೋಟೆಲ್​ನ ಪಾರ್ಟಿ‌ ನಡೆಯುವ ಹಾಲ್​ನ ಆಯಕಟ್ಟಿನ ಸ್ಥಳಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಲಾಗಿತ್ತು ಎಂದು ತಿಳಿದುಬಂದಿದೆ. ಈ ಹೋಟೆಲ್​ನಲ್ಲಿ ಮಧ್ಯರಾತ್ರಿಯವರೆಗೂ ಡ್ರಗ್ಸ್​ ಪಾರ್ಟಿ ನಡೆಯುತ್ತಿತ್ತು. ಈ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ಯುವತಿಯರ ಫೋಟೋಗಳನ್ನು ರಹಸ್ಯವಾಗಿ ಸೆರೆಹಿಡಿಯಲಾಗುತ್ತಿತ್ತು ಎಂದು ತನಿಖೆಯಲ್ಲಿ ಬಯಲಾಗಿದೆ. 

ಇದರ ಹಿಂದೆ ಆರೋಪಿ ಸೈಜು ಥಾಂಕಚನ್​ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಹೆತ್ತವರ ಅನುಮತಿಯಿಲ್ಲದೆ ಪಾರ್ಟಿಯಲ್ಲಿ ಭಾಗವಹಿಸುವ ಯುವತಿಯರ ಫೋಟೋಗಳನ್ನು ಸರೆಹಿಡಿದು ಬಳಿಕ ಅವರನ್ನು ಬ್ಲಾಕ್​ಮೇಲ್​ ಮಾಡಲಾಗುತ್ತಿತ್ತು. ಈ ಮೂಲಕ ಯುವತಿಯರನ್ನು ಡ್ರಗ್ಸ್​ ವ್ಯವಹಾರಕ್ಕೆ ದುರ್ಬಳಕೆ ಮಾಡಿಕೊಳ್ಳುವ ದುರುದ್ದೇಶದಿಂದ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ್ದರು ಎಂದು ತಿಳಿದುಬಂದಿದೆ. 

ಅಪಘಾತದ ಬಳಿಕ ನಡೆದಿರುವ ಸರಣಿ ಘಟನೆಗಳ ಬಗ್ಗೆ ಕೇರಳದ ಅಪರಾಧ ವಿಭಾಗದ ತಂಡವು ತನಿಖೆ ಮಾಡುತ್ತಿದೆ. ಆರೋಪಿ ಸೈಜು ಮೊಬೈಲ್​ನಲ್ಲಿ ಕೆಲವು ಪೂರಕ ವೀಡಿಯೋಗಳಿರುವುದನ್ನು ಕಂಡುಕೊಂಡಿದೆ. ತನಿಖಾಧಿಕಾರಿಗಳು ಪತ್ತೆ ಹಚ್ಚಿದ ವೀಡಿಯೋಗಳನ್ನು ಹೋಟೆಲ್ ಮಾಲೀಕ ರಾಯ್ ಜೋಸೆಫ್ ವಯಲತ್ ಮತ್ತು ಸೈಜು ರಹಸ್ಯವಾಗಿ ಸೆರೆಹಿಡಿದಿದ್ದಾರೆ. ಇನ್ನು ಸೈಜು ತನ್ನ ಕಾಕ್ಕನಾಡದಲ್ಲಿರುವ ಫ್ಲ್ಯಾಟ್​ನಲ್ಲಿ ಡ್ರಗ್ಸ್​ ಪಾರ್ಟಿಗಳನ್ನು ಆಯೋಜಿಸುತ್ತಿದ್ದ.

ಮೃತ ಮಾಡೆಲ್‌ಗಳಾದ ಅನ್ಸಿ ಕಬೀರ್ ಮತ್ತು ಅಂಜನಾ ಶಾಜನ್ ರನ್ನು ತಮ್ಮ ಮನೆಯಲ್ಲಿ ನಡೆಯುವ ಅಂತಹ ಪಾರ್ಟಿಗೆ ಹಾಜರಾಗುವಂತೆ ಪ್ರೇರೇಪಿಸಿದ್ದ ಎಂಬ ಆರೋಪ ಕೇಳಿಬಂದಿದೆ. ಆದರೆ, ಸೈಜು ಆಹ್ವಾನವನ್ನು ಮಾಡೆಲ್​ಗಳು ತಿರಸ್ಕರಿಸಿದ್ದರು. ಆದರೂ ಅವರ ಕಾರು ಮಿಸ್​ ಆಗದಂತೆ ಹೋಟೆಲ್​ನ ಹೊರಭಾಗದಲ್ಲಿದ್ದ ಜ್ಯೂಸ್​ ಶಾಪ್​ನಲ್ಲೇ ಕಾಯುತ್ತಾ ನಿಂತಿದ್ದ ಎಂದು ತಿಳಿದುಬಂದಿದೆ. ಅದನ್ನು ನೋಡಿದ ಮಾಡೆಲ್​ಗಳು ತಮ್ಮ ಸಹಪಾಠಿಗಳೊಂದಿಗೆ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಸೈಜು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದರಿಂದ, ಆಘಾತದಿಂದ ಕಾರು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಪರಿಣಾಮ ಮಾಡೆಲ್​ಗಳಿಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ ಎಂದು ಪೊಲೀಸ್​ ಮೂಲಗಳು ಹೇಳಿವೆ.

ರಾಯ್ ಮತ್ತು ಸೈಜು ಹೋಟೆಲ್‌ನಲ್ಲಿ ಪಾರ್ಟಿಯ ಬಳಿಕ ಮಾದಕ ದ್ರವ್ಯ ಒಳಗೊಂಡಿದ್ದ ಮದ್ಯವನ್ನು ಮಾಡೆಲ್‌ಗಳ ಜೊತೆಯಲ್ಲಿದ್ದ ಆಶಿಕ್ ಮತ್ತು ಅಬ್ದುಲ್ ರೆಹಮಾನ್‌ಗೆ ನೀಡುತ್ತಿದ್ದರು ಎಂಬುದು ತನಿಖೆಯ ವೇಳೆ ಬಹಿರಂಗವಾಗಿದೆ. ಮಾಡೆಲ್​ಗಳಿದ್ದ ಕಾರನ್ನು ರೆಹಮಾನ್​ ಚಲಾಯಿಸುತ್ತಿದ್ದ. ಆಶಿಕ್​ ಕೂಡ ಮಾಡೆಲ್​ಗಳ ಜತೆ ಇದ್ದ. ಆತನು ಕೂಡ ಅಪಘಾತಲ್ಲಿ ಮೃತಪಟ್ಟಿದ್ದಾನೆ. ರೆಹಮಾನ್​ ಮಾತ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಹೋಟೆಲ್​ ಹೊರಗೆ ಮಾಡೆಲ್​​ಗಳಿಗಾಗಿ ಕಾಯುತ್ತಿರುವ ವಿಚಾರವನ್ನು ಸೈಜು ಹೋಟೆಲ್​ ಮಾಲೀಕ ರಾಯ್​ಗೆ ಹೇಳಿಕೊಂಡಿದ್ದ. ಅಲ್ಲದೆ, ಮಾಡೆಲ್​ಗಳ ಕಾರು ಅಪಘಾತವಾದ ಬಳಿಕ ಆ ವಿಚಾರವನ್ನು ಸಹ ಮಾಲೀಕನಿಗೆ ತಿಳಿಸಿದ್ದ. 

ಆ ಬಳಿಕವೇ ಮಾಲೀಕ ಹೋಟೆಲ್​ನಲ್ಲಿದ್ದ ಸಿಸಿಟಿವಿಯ ಡಿವಿಆರ್​ ಅನ್ನು ನಾಶ ಮಾಡಿರುವುದು ತನಿಖಾಧಿಕಾರಿಗಳಿಗೆ ಗೊತ್ತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸೈಜು ಮತ್ತು ರಾಯ್ ಅವರನ್ನು ಬೆಂಬಲಿಸಿದ ಮತ್ತೋರ್ವ ಯುವತಿ ಡ್ರಗ್ ಪಾರ್ಟಿಗಳಲ್ಲಿ ಪಾಲುದಾರಳಾಗಿದ್ದಳು ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ. ಸೈಜು ಅವರ ಫೋನ್‌ನಲ್ಲಿ ಆರೋಪಿ ಮಹಿಳೆ ಪಾರ್ಟಿಗಳಿಗೆ ಹಾಜರಾಗುವ ದೃಶ್ಯಗಳನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಶೀಘ್ರದಲ್ಲೇ ಆಕೆಯನ್ನು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article