Mangaluru: ದುಬೈ ಮಾರ್ಕೆಟ್ ನಲ್ಲಿ ಬೆಂಕಿ ಅವಘಡ; ತಡರಾತ್ರಿ ಬೆಂಕಿಗಾಹುತಿಯಾಗಿ ಭಸ್ಮವಾದ 2 ಅಂಗಡಿಗಳು

ಮಂಗಳೂರು: ನಗರದ ಸೆಂಟ್ರಲ್ ಮಾರುಕಟ್ಟೆ  ಬಳಿಯ ದುಬೈ ಮಾರ್ಕೆಟ್ ನ ನೆಲ ಅಂತಸ್ತಿನ ಎರಡು ಅಂಗಡಿಗಳು ತಡರಾತ್ರಿ‌ ವೇಳೆ  ಬೆಂಕಿಗಾಹುತಿಯಾಗಿ ಸಂಪೂರ್ಣ ಭಸ್ಮವಾದ ದುರ್ಘಟನೆ ಸಂಭವಿಸಿದೆ 


ದುಬೈ ಮಾರ್ಕೆಟ್ ನ ನೆಲ ಅಂತಸ್ತಿನ ಫ್ಯಾನ್ಸಿ ಹಾಗೂ ಇಲೆಕ್ಟ್ರಿಕ್ ಅಂಗಡಿಗಳ ಒಳಗಿನಿಂದ ತಡರಾತ್ರಿ 3.15ರ ಸುಮಾರಿಗೆ ಹೊಗೆ ಏಳುಲು ಆರಂಭಿಸಿದೆ. ಇದನ್ನು ಕಂಡ ಅಲ್ಲಿಯೇ ಇದ್ದ ಸೆಕ್ಯುರಿಟಿ ಗಾರ್ಡ್ ಗಳು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. 


3.20ರ ಸುಮಾರಿಗೆ ಸ್ಥಳಕ್ಕೆ ದೌಡಾಯಿಸಿದ ಪಾಂಡೇಶ್ವರ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕೆಲ ಹೊತ್ತಿನಲ್ಲಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ‌. 
ಆದರೆ, ಅಷ್ಟರಲ್ಲಾಗಲೇ ಎರಡು ಅಂಗಡಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಘಟನೆಯಲ್ಲಿ ಅಂಗಡಿಯಲ್ಲಿದ್ದ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ಭಸ್ಮವಾಗಿದೆ. 

ಶಾರ್ಟ್ ಸರ್ಕಿಟ್ ನಿಂದ ಈ ಅವಘಡ ಸಂಭವಿಸಿರಬಹುದೆಂದು‌ ಶಂಕಿಸಲಾಗಿದೆ. ಅಂಗಡಿಗಳ ಮಾಲಕರು ಯಾರೆಂದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಇನ್ನಷ್ಟೇ ಮಾಹಿತಿ ದೊರಕಬೇಕಿದೆ.