
ಮಂಗಳೂರು: ಆಟೋ ರಿಕ್ಷಾ ಚಲಾಯಿಸುತ್ತಿದ್ದಾಗಲೇ ಚಾಲಕ ಹೃದಯಾಘಾತಕ್ಕೆ ಬಲಿ: ನೇತ್ರಾವತಿ ಸೇತುವೆಯಲ್ಲಿ ಘಟನೆ
12/03/2021 02:36:00 AM
ಉಳ್ಳಾಲ: ಆಟೋ ಚಲಾಯಿಸುತ್ತಿರುವಾಗಲೇ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ನಗರದ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ.
ಮೊಹಮ್ಮದ್ ಹನೀಫ್ ಹೃದಯಾಘಾತಕ್ಕೆ ಬಲಿಯಾದವರು.
ಇಂದು ಬೆಳ್ಳಂಬೆಳಗ್ಗೆ ಅವರು ಮಾರುಕಟ್ಟೆಗೆ ತರಕಾರಿ ಖರೀದಿಸಲೆಂದು ಮೊಹಮ್ಮದ್ ಹನೀಫ್ ವ್ಯಾಪಾರಿಯೋರ್ವರನ್ನು ಕರೆತರುತ್ತಿದ್ದರು. ಅವರು ತೊಕ್ಕೊಟ್ಟು ಬಳಿಯ ಕಲ್ಲಾಪು ಪ್ರದೇಶದಲ್ಲಿರುವ ಗ್ಲೋಬಲ್ ಮಾರ್ಕೆಟ್ ಗೆ ತರಕಾರಿ ತರಲೆಂದು ಆಗಮಿಸುತ್ತಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ.
ಮಂಗಳೂರಿನಿಂದ ಜಪ್ಪಿನಮೊಗರು ಹೆದ್ದಾರಿಯಲ್ಲೇ ಮೊಹಮ್ಮದ್ ಹನೀಫ್ ಅವರಿಗೆ ಕಣ್ಣು ಮಂಜಾಗಿದ್ದು ರಸ್ತೆ ಮಧ್ಯದ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಸಾರ್ವಜನಿಕರು ಅವರಿಗೆ ಶುಶ್ರೂಷೆ ನೀಡಿದ್ದಾರೆ. ಬಳಿಕ ಸಾವರಿಸಿಕೊಂಡು ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋಗಿದ್ದಾರೆ. ನೇತ್ರಾವತಿ ಸೇತುವೆಯ ಮಧ್ಯೆ ಭಾಗಕ್ಕೆ ಬರುತ್ತಿದ್ದಂತೆ ಆಟೋ ಸ್ಥಗಿತಗೊಂಡಿದ್ದು ಹನೀಫ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.