-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪತಿಯೊಂದಿಗೆ ಹೋಗಲೊಪ್ಪದ ಪತ್ನಿಯನ್ನು ಮಗುವಿನೊಂದಿಗೆ ‘ವೇಶ್ಯಾವಾಟಿಕೆಗಾಗಿ ಮಾನವ ಕಳ್ಳಸಾಗಣೆ ಸಂತ್ರಸ್ತರ ಪುನರ್ವಸತಿ ಕೇಂದ್ರ’ಕ್ಕೆ ಕಳುಹಿಸಿದ ಇನ್​ಸ್ಪೆಕ್ಟರ್ ಗೆ ದಂಡ ವಿಧಿಸಿದ ಕೋರ್ಟ್

ಪತಿಯೊಂದಿಗೆ ಹೋಗಲೊಪ್ಪದ ಪತ್ನಿಯನ್ನು ಮಗುವಿನೊಂದಿಗೆ ‘ವೇಶ್ಯಾವಾಟಿಕೆಗಾಗಿ ಮಾನವ ಕಳ್ಳಸಾಗಣೆ ಸಂತ್ರಸ್ತರ ಪುನರ್ವಸತಿ ಕೇಂದ್ರ’ಕ್ಕೆ ಕಳುಹಿಸಿದ ಇನ್​ಸ್ಪೆಕ್ಟರ್ ಗೆ ದಂಡ ವಿಧಿಸಿದ ಕೋರ್ಟ್

ಬೆಳಗಾವಿ: ದಾಂಪತ್ಯ ವೈಷಮ್ಯದ ಹಿನ್ನೆಲೆಯಲ್ಲಿ ಪತಿಯ ಮನೆನ್ನು ತೊರೆದ ಪತ್ನಿಯನ್ನು 5 ತಿಂಗಳ ಕಾಲ ಅಕ್ರಮವಾಗಿ ‘ವೇಶ್ಯಾವಾಟಿಕೆಗಾಗಿ ಮಾನವ ಕಳ್ಳಸಾಗಣೆ ಸಂತ್ರಸ್ತರ ಪುನರ್ವಸತಿ ಕೇಂದ್ರ’ದಲ್ಲಿ ಇಟ್ಟಿದ್ದ ಪೊಲೀಸ್​ ​ಇನ್​ಸ್ಪೆಕ್ಟರ್ ಗೆ ಇದೀಗ ಸಂಕಷ್ಟ ಎದುರಾಗಿದೆ. ಕೋರ್ಟ್ ಆತನಿಗೆ ಛೀಮಾರಿ ಹಾಕಿ ದಂಡ ವಿಧಿಸಿದೆ.

ಸಂತ್ರಸ್ತ ಯುವತಿಯು 22 ವರ್ಷದವಳಾಗಿದ್ದು, ಈಕೆಗೆ 2017ರಲ್ಲಿ ವಿವಾಹವಾಗಿತ್ತು. 3 ವರ್ಷದ ಹೆಣ್ಣು ಮಗುವೂ ಇದೆ. ಈ ನಡುವೆ ಪತಿ - ಪತ್ನಿ ಮಧ್ಯೆ ಮನಸ್ತಾಪ ಉಂಟಾಗಿತ್ತು. ಪರಿಣಾಮ, ಯುವತಿ ತನ್ನ ಪುತ್ರಿಯೊಂದಿಗೆ ಪತಿಯ ಮನೆ ತೊರೆದಿದ್ದಳು. 2021ರ ಮೇ 3ರಂದು ಆಕೆಯ ಪತಿ ಬೆಳಗಾವಿಯ ಮಾಳಮಾರುತಿ ಪೊಲೀಸ್​ ಠಾಣೆಯಲ್ಲಿ ಪತ್ನಿ ನಾಪತ್ತೆಯಾಗಿದ್ದಾಳೆಂದು ದೂರು ದಾಖಲಿಸಿದ್ದನು.

ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್​ ಸುನೀಲ್​ ಬಾಳಾಸಾಹೇಬ್​ ಪಾಟೀಲ್​, ದೂರುದಾರನ ಪತ್ನಿಯನ್ನು ಪತ್ತೆಹಚ್ಚಿ ಕರೆಸಿ ವಿಚಾರಣೆ ನಡೆಸಿದ್ದರು. ಆದರೆ ಆಕೆ ಮಾತ್ರ ಪತಿಯೊಂದಿಗೆ ತೆರಳಲು ನಿರಾಕರಿಸಿದ್ದಳು. ಪತಿಯ ಮನೆಗೆ ಹೋಗಲೊಪ್ಪದ ಪತ್ನಿ ಮತ್ತು ಆಕೆಯ 3 ವರ್ಷದ ಹೆಣ್ಣು ಮಗುವನ್ನು ‘ವೇಶ್ಯಾವಾಟಿಕೆಗಾಗಿ ಮಾನವ ಕಳ್ಳಸಾಗಣೆ ಸಂತ್ರಸ್ತರ ಪುನರ್ವಸತಿ ಕೇಂದ್ರ’ಕ್ಕೆ ಇನ್​ಸ್ಪೆಕ್ಟರ್ ಕಳುಹಿಸಿದ್ದರು. 

ಆಕೆ ಈ ಬಗ್ಗೆ 'ತನ್ನ ಇಚ್ಛೆಗೆ ವಿರುದ್ಧವಾಗಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ' ಎಂದು ಇನ್​ಸ್ಪೆಕ್ಟರ್​ ಹಾಗೂ ಪುನರ್ವಸತಿ ಕೇಂದ್ರದ ವಿರುದ್ಧ ಹೈಕೋರ್ಟ್​ ಮೆಟ್ಟಿಲೇರಿದ್ದಳು. ಅರ್ಜಿದಾರ ಮಹಿಳೆಯು ಈ ಬಗ್ಗೆ ಮೇ 25ರಂದು ಠಾಣೆಗೆ ಬಂದು ಮೌಖಿಕ ಹೇಳಿಕೆ ನೀಡಿದ್ದರು. ''ಪತಿಯು ಪ್ರತಿದಿನ ಕುಡಿದುಕೊಂಡು ಬಂದು ತನ್ನ ಹಲ್ಲೆ ನಡೆಸುತ್ತಿದ್ದಾನೆ. ಇದೇ ಕಾರಣಕ್ಕೆ ನಮ್ಮಿಬ್ಬರ ಮಧ್ಯೆ ಜಗಳವಾಗುತ್ತಿದೆ" ಎಂದು ಹೇಳಿದ್ದರು.

ಪೊಲೀಸ್ ಇನ್ ಸ್ಪೆಕ್ಟರ್, ಯುವತಿಯ ಪತಿಯನ್ನು ಠಾಣೆಗೆ ಕರೆಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರು. ಆದರೆ, ಆಕೆ ಪತಿಯೊಂದಿಗೆ ತೆರಳಲು ಒಪ್ಪಿರಲಿಲ್ಲ. ಆಕೆಯ ಪಾಲಕರೂ ಠಾಣೆಗೆ ಬರಲು ನಿರಾಕರಿಸಿದರು. ಬಳಿಕ ಪುನರ್ವಸತಿ ಕೇಂದ್ರವನ್ನು ಸಂಪರ್ಕಿಸಿ, ಅಲ್ಲಿಗೆ ಕಳುಹಿಸಿಕೊಡಲಾಯಿತು ಎಂದು ಇನ್​ಸ್ಪೆಕ್ಟರ್​ ಪ್ರಮಾಣ ಪತ್ರದಲ್ಲಿ ತಿಳಿಸಿದ್ದರು. 

ಆದರೆ, ವಿಚಾರಣೆ ನಡೆಸಿದ ಕೋರ್ಟ್ ''ಪತಿಯೊಂದಿಗೆ ತೆರಳಲು ನಿರಾಕರಿಸಿರುವ 22 ವರ್ಷದ ಯುವತಿ ಹಾಗೂ ಅವಳ 3 ವರ್ಷದ ಮಗಳನ್ನು ವೇಶ್ಯಾವಾಟಿಕೆ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿರುವುದು ನಿಜಕ್ಕೂ ಆಘಾತಕಾರಿ. ಇದು ಪತಿಯ ಮನೆ ತೊರೆದು ಬಂದು, ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿರುವ ಪ್ರಕರಣವೇ ಹೊರತು ನಿರ್ಗತಿಕ ಅಥವಾ ರಕ್ಷಿಸಲ್ಪಟ್ಟ ಮಹಿಳೆಯ ಪ್ರಕರಣವಲ್ಲ‌ ಎಂದು ಕೋರ್ಟ್​ ಅಚ್ಚರಿ ವ್ಯಕ್ತಪಡಿಸಿದೆ.

ಆದರೆ ಇನ್​ಸ್ಪೆಕ್ಟರ್​ ಪ್ರಮಾಣಪತ್ರದಲ್ಲಿ ಯುವತಿಯೇ ಠಾಣೆಗೆ ಬಂದಿದ್ದಳು ಎಂದು ಹೇಳಲಾಗಿದೆ. ಆದರೆ, ಅದೂ ಸತ್ಯವಲ್ಲ. ಪತಿ ನೀಡಿರುವ ದೂರಿನನ್ವಯ ಆಕೆಯನ್ನು ಠಾಣೆಗೆ ಕರೆಸಿಕೊಳ್ಳಲಾಗಿದೆ. ಅನ್ಯ ಉದ್ದೇಶಕ್ಕೆಂದೇ ಇರುವ ಪುನರ್ವಸತಿ ಕೇಂದ್ರದಲ್ಲಿ ಮೇ 26ರಿಂದ ಅ.21ರವರೆಗೆ ಬಹುತೇಕ 5 ತಿಂಗಳ ಕಾಲ ಯುವತಿ ಮತ್ತು ಮಗುವನ್ನು ಇರಿಸಿರುವ ಇನ್​ಸ್ಪೆಕ್ಟರ್​ ಕ್ರಮ ಬಲವಂತದ ಬಂಧನವಲ್ಲದೇ ಮತ್ತೇನಲ್ಲ. ಅರ್ಜಿದಾರರನ್ನು ಬಂಧಿಸುವಂಥ ಯಾವುದೇ ಆರೋಪಗಳಿಲ್ಲದಿದ್ದರೂ ಆಕೆಗೆ ಜೈಲು ಶಿಕ್ಷೆ ವಿಧಿಸಿದಂತಾಗಿದೆ ಎಂದು ಕೋರ್ಟ್​ ಬೇಸರ ವ್ಯಕ್ತಪಡಿಸಿದೆ. 

ಅರ್ಜಿದಾರ ಯುವತಿ ನೆರೆ ಮನೆಯಾತನನ್ನು ಪ್ರೀತಿಸುತ್ತಿದ್ದು, ಇದೇ ಕಾರಣಕ್ಕೆ ಪತಿ ಮನೆಯನ್ನು ತೊರೆಯಲು ನಿರ್ಧರಿಸಿದ್ದಾಳೆಂಬ ವಿಚಾರ ವಿಚಾರಣೆ ನಡೆಸುವ ವೇಳೆ ಇನ್​ಸ್ಪೆಕ್ಟರ್​ಗೆ ತಿಳಿದಿದೆ. ಈ ಕಾರಣದಿಂದ ಆಕೆಯನ್ನು ನೆರೆಮನೆಯ ವ್ಯಕ್ತಿಯಿಂದ ದೂರವಿರಿಸುವ ಉದ್ದೇಶದಿಂದ ಒತ್ತಾಯಪೂರ್ವಕವಾಗಿ ಪುನರ್ವಸತಿ ಕೇಂದ್ರದಲ್ಲಿರಿಸಿದ್ದಾರೆ ಎಂದೆನಿಸುತ್ತಿದೆ. ಆದರೆ, ದಾಂಪತ್ಯ ವಿಚಾರದ ನಡುವೆ ಮಧ್ಯಪ್ರವೇಶಿಸಿ, ನ್ಯಾಯ ಕೊಡಿಸುವ ನೆಪದಲ್ಲಿ ನೈತಿಕ ಪೊಲೀಸ್​ಗಿರಿ ನಡೆಸುವ ಅಧಿಕಾರ ಪೊಲೀಸರಿಗಿಲ್ಲ ಎಂದು ಕೋರ್ಟ್​ ಹೇಳಿದೆ. 

22 ವರ್ಷದ ಯುವತಿ ಹಾಗೂ ಆಕೆಯ ಮಗುವನ್ನು ವೇಶ್ಯಾವಾಟಿಕೆ ಸಂತ್ರಸ್ತರ ಪುನರ್ವಸತಿ ಕೇಂದ್ರದಲ್ಲಿರಿಸಿರುವ ಇನ್​ಸ್ಪೆಕ್ಟರ್​ ಸೂಕ್ಷ್ಮತೆ ಹಾಗೂ ಮಾನವೀಯತೆಯನ್ನು ಮರೆತು ವ್ಯವಹರಿಸಿದ್ದಾರೆ ಎಂದು ಕಿಡಿ ಕಾರಿರುವ ನ್ಯಾಯಮೂರ್ತಿ ಎನ್.ಎಸ್​. ಸಂಜಯ್​ಗೌಡ ಅವರಿದ್ದ ಪೀಠ, ಯುವತಿ ಹಾಗೂ ಮಗುವನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದೆ. ಅಲ್ಲದೆ ಪೊಲೀಸ್​ ಇನ್​ಸ್ಪೆಕ್ಟರ್​ ಹಾಗೂ ಪುನರ್ವಸತಿ ಕೇಂದ್ರಕ್ಕೆ ಹೈಕೋರ್ಟ್​ 2 ಲಕ್ಷ ರೂ. ದಂಡ ವಿಧಿಸಿದೆ. ಅಮಾನವೀಯವಾಗಿ ವರ್ತಿಸಿದ ಅಧಿಕಾರಿಗಳ ವಿರುದ್ಧ ನ್ಯಾಯಮೂರ್ತಿ ಕಿಡಿಕಾರಿದ್ದಾರೆ.

Ads on article

Advertise in articles 1

advertising articles 2

Advertise under the article