-->

ಎರಡೂವರೆ ವರ್ಷದ ಪುತ್ರಿಯ ಸಾವಿನಲ್ಲೂ ಸಾರ್ಥಕತೆ ಕಾಣಲು ಅಂಗಾಂಗ ದಾನ ಮಾಡಿದ ತಂದೆ: ಇವರ ಕರುಣಾಜನಕ ಕಥೆ ಕೇಳಿದರೆ ಎಂಥವರ ಹೃದಯವೂ ಕರಗದಿರದು

ಎರಡೂವರೆ ವರ್ಷದ ಪುತ್ರಿಯ ಸಾವಿನಲ್ಲೂ ಸಾರ್ಥಕತೆ ಕಾಣಲು ಅಂಗಾಂಗ ದಾನ ಮಾಡಿದ ತಂದೆ: ಇವರ ಕರುಣಾಜನಕ ಕಥೆ ಕೇಳಿದರೆ ಎಂಥವರ ಹೃದಯವೂ ಕರಗದಿರದು

ಚಂಡಿಗಢ: ಅಪಘಾತವೊಂದರಲ್ಲಿ ಮೃತಪಟ್ಟ ಎರಡೂವರೆ ವರ್ಷದ ಬಾಲಕಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ನಿಜವಾಗಿಯೂ ಈ ಬಾಲಕಿಯ ಸ್ಟೋರಿ ಕೇಳಿದರೆ ಖಂಡಿತಾ ಕಣ್ಣೀರು ಬರುತ್ತದೆ. ಈ ಸಾವು ನ್ಯಾಯವೇ ಎಂದು ದೇವರನ್ನು ಕೇಳಿ ಬಿಡಬಹುದು. ಅಷ್ಟೇ ಅಲ್ಲ, ಪತ್ನಿ, ಮಗ, ಮಗಳು ಸೇರಿ ಕುಟುಂಬದ 7 ಸದಸ್ಯರನ್ನು ಒಂದೇ ಸಲ ಕಳೆದುಕೊಂಡು ನೋವಿನಲ್ಲಿದ್ದರೂ ಮಗಳ ಅಂಗಾಗದಾನ ಮಾಡಿ 9 ಜನರಿಗೆ ಬದುಕು ಕೊಟ್ಟ ಬಾಲಕಿಯ ತಂದೆಗೂ ನಮಿಸದೆ ಇರಲಾರೆವು. 

ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಎರಡುವರೆ ವರ್ಷದ ಪುಟ್ಟ ಬಾಲೆಯ ಹೆಸರು ಅನಿಕಾ. ಈಕೆ ಬೆಂಗಳೂರು ಮೂಲದ ಉದ್ಯಮಿ ಅಮಿತ್ ಗುಪ್ತಾ ಹಾಗೂ ಕೀರ್ತಿ ಗುಪ್ತಾ ದಂಪತಿಯ ಪುತ್ರಿ. ಈ ದಂಪತಿಗೆ 6 ವರ್ಷದ ಪುತ್ರನೂ ಕೂಡ ಇದ್ದ. 

ಡಿ.12ರಂದು ಚಂಡಿಗಢದ ಮೊಹಾಲಿಯಲ್ಲಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ಅಮಿತ್ ಗುಪ್ತಾ ಪತ್ನಿ ಕೀರ್ತಿ ಗುಪ್ತಾ ಮತ್ತು ಪುತ್ರ  ನುವಂಶ್ ಸೇರಿ ಕುಟುಂಬದ 6 ಮಂದಿ ದುರಂತ ಅಂತ್ಯ ಕಂಡಿದ್ದರು. ಅಲ್ಲದೆ ಈ ಅಪಘಾತದಲ್ಲಿ ಗಂಭೀರಯ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪುಟ್ಟ ಬಾಲೆ ಅನಿಕಾಳನ್ನು ಚಂಡೀಗಢ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಪತ್ನಿ, ಪುತ್ರ ಸೇರಿ ಕುಟುಂಬ 6 ಮಂದಿಯನ್ನು ಕಳೆದುಕೊಂಡು ದುಃಖತಪ್ತರಾಗಿದ್ದ ಅಮಿತ್​ ಗುಪ್ತಾ, ಪುತ್ರಿಯನ್ನು ಉಳಿಸಿಕೊಡುವಂತೆ ವೈದ್ಯರು ಹಾಗೂ ದೇವರನ್ನು ಪರಿಪರಿಯಾಗಿ ಬೇಡಿಕೊಂಡರು. ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ವಿಧಿಯಾಟ ಬೇರೆಯೇ ಇತ್ತು. ಡಿ.22ರಂದು ಬಾಲಕಿ ಅನಿಕಾಳ ಮಿದುಳು ನಿಷ್ಕ್ರಯಗೊಂಡಿತ್ತು. ಇನ್ನು ಅನಿಕಾ ಬದುಕಿ ಉಳಿಯುವ ಚಾನ್ಸೇ ಇಲ್ಲ ಎಂದು ತಿಳಿಯುತ್ತಿದ್ದಂತೆ ತಂದೆ ಅಮಿತ್​ರ ಆಕ್ರಂದನ ಮುಗಿಲು ಮುಟ್ಟಿತ್ತು. 

ಈ ನೋವಿನಲ್ಲೂ ಮಹತ್ವದ ನಿರ್ಧಾರವನ್ನು ತೆಗೆದುಕೊಂಡ ಅಮಿತ್​ ಗುಪ್ತಾ, ಪುತ್ರಿಯ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದರು. ಕಿಡ್ನಿ, ಲಿವರ್​, ಕಾರ್ನಿಯಾವನ್ನು ದಾನ ಮಾಡಿದ್ದಾರೆ. ಅನಿಕಾಳ ಅಂಗಾಂಗಗಳನ್ನು 9 ಜನರಿಗೆ ಜೋಡಿಸಲಾಗಿದ್ದು, ಆ ಮೂಲಕ 9 ಮಂದಿಯ ಬದುಕಿಗೆ ಜೀವ ದೊರೆತಂತಾಗಿದೆ. 

ಪ್ರೀತಿಯ ಪತ್ನಿ, ಇಬ್ಬರು ಮಕ್ಕಳನ್ನು ಕಳೆದುಕೊಂಡ ಅಮಿತ್​ರ ಬಾಳಲ್ಲಿ ನೋವು, ಸಂಕಟದ ಮೂಟೆಯೇ ಇದೆ. ಇಂತಹ ಸಂಕಷ್ಟದ ಸಂದರ್ಭದಲ್ಲೂ ಪುತ್ರಿಯ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದ ಅಮಿತ್​ರ ವ್ಯಕ್ತಿತ್ವ ಎಲ್ಲರಿಗೂ ಮಾದರಿ. 

"ಇಡೀ ಕುಟುಂಬವೇ ಹೋಯ್ತು. ಪುತ್ರಿಯಾದರೂ ಬದುಕಿ ಉಳಿಯುವಳೆಂಬ ಭರವಸೆಯಲ್ಲಿದ್ದೆ. ಆದರೆ ಆಕೆಯೂ ಬದುಕಿ ಉಳಿಯಲಿಲ್ಲ. ಆ ಒಂಬತ್ತು ಮಂದಿಯಲ್ಲಿರುವ ಅಂಗಾಂಗಗಳ ಮೂಲಕ ನನ್ನ ಪುತ್ರಿ ಜೀವಂತವಾಗಿದ್ದಾಳೆ ಎಂದೇ ಭಾವಿಸಿರುವೆ'' ಎನ್ನುತ್ತಲೇ ಅಮಿತ್ ಗುಪ್ತಾ ಕಣ್ಣೀರಿಟ್ಟರು. ಈ ದೃಶ್ಯ ಹಾಗೂ ಅಂಗಾಂಗ ದಾನ ಪ್ರಕ್ರಿಯೆ ಮುಗಿದ ಬಳಿಕ ಆಸ್ಪತ್ರೆಯ ವೈದ್ಯರ ತಂಡ ಅನಿಕಾಳ ಮೃತದೇಹಕ್ಕೆ ನಮಿಸಿ ಹೂಗುಚ್ಛ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿದ ದೃಶ್ಯ ಮನಕಲಕುವಂತಿತ್ತು.

Ads on article

Advertise in articles 1

advertising articles 2

Advertise under the article