ಶೌಚಾಲಯ ಫ್ಲಷ್ ರಿಪೇರಿಗೆಂದು ಬಂದಾತನಿಗೆ ಬಿಗ್ ಶಾಕ್: ಟ್ಯಾಂಕ್ ನೊಳಗಡೆ ಪತ್ತೆಯಾಗಿತ್ತು ನವಜಾತ ಶಿಶುವಿನ ಮೃತದೇಹ!

ತಂಜಾವೂರು: ಶೌಚಾಲಯದ ಫ್ಲಷ್‌ನೊಳಗೆ ನವಜಾತ ಶಿಶುವಿನ ಮೃತದೇಹವೊಂದು ಪತ್ತೆಯಾಗಿರುವ ಅಮಾನವೀಯ ದುಷ್ಕೃತ್ಯವೊಂದು ತಮಿಳುನಾಡಿನ ತಂಜಾವೂರಿನ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ತಂಜಾವೂರಿನ ವೈದ್ಯಕೀಯ ಕಾಲೇಜೊಂದರ ಆಸ್ಪತ್ರೆಯಲ್ಲಿನ (ಟಿಎಂಸಿಹೆಚ್) ಫ್ಲಷ್‌ ಸರಿಯಾಗಿ ಕಾರ್ಯ ನಿರ್ವಹಿಸದಿದ್ದ ಹಿನ್ನೆಲೆಯಲ್ಲಿ ದುರಸ್ತಿ ಮಾಡಲೆಂದು ರಿಪೇರಿಯವರನ್ನು ಕರೆದಿದ್ದರು.  ರಿಪೇರಿ ಮಾಡಲು ಹೋಗಿದ್ದ ಸಿಬ್ಬಂದಿ ಫ್ಲಷ್‌ನ ಟ್ಯಾಂಕ್‌ ತೆರೆಯುತ್ತಿದ್ದಂತೆ ಆತ ಶಾಕ್‌ ಗೆ ಒಳಗಾಗಿದ್ದಾನೆ. ಏಕೆಂದರೆ ಅದರಲ್ಲಿ ನವಜಾತ ಶಿಶುವೊಂದರ ಮೃತದೇಹವೊಂದು ಪತ್ತೆಯಾಗಿದೆ.

ಆಸ್ಪತ್ರೆಯ ತೀವ್ರ ನಿಗಾ ಘಟಕದ ಶೌಚಗೃಹದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ತಕ್ಷಣ ವೈದ್ಯಾಧಿಕಾರಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಮೃತದೇಹವನ್ನು ತಪಾಸಣೆ ನಡೆಸಲೆಂದು ಕಳುಹಿಸಲಾಗಿದೆ. ಮಗು ಫ್ಲಷ್‌ ಟ್ಯಾಂಕ್‍ಗೆ ಬೀಳುವ ಮುನ್ನವೇ ಮೃತಪಟ್ಟಿದೆಯೋ ಅಥವಾ ನೀರಿನಲ್ಲಿ ಮುಳುಗಿ ಸಾವು ಸಂಭವಿಸಿದೆಯೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಎಲ್ಲಾ ದೃಶ್ಯವು ಸೆರೆಯಾಗಿದ್ದು, ಅದರ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ.