ರಂಗಾರೆಡ್ಡಿ (ತೆಲಂಗಾಣ): ಸ್ಕೂಟರ್ ಗೆ ಢಿಕ್ಕಿ ಹೊಡೆದ ಕಾರೊಂದು ಸಹೋದರಿಯರ ಪ್ರಾಣವನ್ನೇ ಕಸಿದುಕೊಂಡ ಹೃದಯವಿದ್ರಾವಕ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್ನ ರೆಡ್ಡಿಪಲ್ಲಿ ಗ್ರಾಮದ ಶಿಕ್ಷಕ ಲಕ್ಷ್ಮಣ್ ಎಂಬವರ ಪುತ್ರಿಯರಾದ ಪ್ರೇಮಿಕಾ ಹಾಗೂ ಅಕ್ಷಯಾ ಎಂಬವರು ಮೃತ ದುರ್ದೈವಿ ಸಹೋದರಿಯರು. ಅವರ ಸಂಬಂಧಿಕಳಾದ ಸೌಮ್ಯಾ ಎಂಬವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರೇಮಿಕಾ, ಅಕ್ಷಯಾ ಹಾಗೂ ಅವರ ದೊಡ್ಡಪ್ಪನ ಮಗಳಾದ ಸೌಮ್ಯಾ ಜೊತೆಯಾಗಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದವ ಚಾಲಕ ಇವರ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಸ್ಕೂಟರ್ ಮಗುಚಿ ಮೂವರೂ ಕೆಳಕ್ಕೆ ಬಿದ್ದಿದ್ದಾರೆ.
ಪರಿಣಾಮ ಪ್ರೇಮಿಕಾ ಸ್ಥಳದಲ್ಲಿಯೇ ಮೃತಪಟ್ಟರೆ, ಅಕ್ಷಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಸೌಮ್ಯಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದ್ದು, ಸಾವು – ಬದುಕಿನ ಮಧ್ಯೆ ಹೋರಾಟ ನಡೆಸಿರುವುದಾಗಿ ಹೇಳಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಕಾರು ಚಾಲಕ ಮದ್ಯದ ಅಮಲಿನಲ್ಲಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಅತಿಯಾದ ವೇಗದಿಂದ ಆತ ಕಾರು ಚಲಾಯಿಸುತ್ತಿದ್ದ. ಇದರಿಂದ ಅಪಘಾತ ಸಮಭವಿಸಿದೆ. ಆದಷ್ಟು ಬೇಗ ಆತನ ಬಂಧಿಸಲಾಗುವುದು ಎಂದಿದ್ದಾರೆ. ಆದರೆ ಇಬ್ಬರು ಮಕ್ಕಳನ್ನು ಒಂದೇಬಾರಿಗೆ ಕಳೆದುಕೊಂಡ ಹೆತ್ತವರ ಕಣ್ಣೀರು ಮಾತ್ರ ನೋಡಲಾಗುತ್ತಿಲ್ಲ.