8 ವರ್ಷಗಳ ಹಿಂದೆ ಡೇಟಿಂಗ್​ ಆ್ಯಪ್​ ಮೂಲಕ ಪ್ರೀತಿಯ ಬಲೆಗೆ: ಅದ್ದೂರಿ ವಿವಾಹವಾದ ಸಲಿಂಗ ಪ್ರೇಮಿಗಳು!

ಹೈದರಾಬಾದ್​: ಕಳೆದ 8 ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದ ಸಲಿಂಗ ಪ್ರೇಮಿಗಳಿಬ್ಬರ ವಿವಾಹವು ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದೆ. 

ಸುಪ್ರಿಯೋ ಚಕ್ರವರ್ತಿ(31) ಮತ್ತು ಅಭಯ್‌ ದಂಗ್​(34) ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದವರು. ಸಣ್ಣಂದಿನಿಂದಲೇ ತಾವಿಬ್ಬರೂ ‘ಗೇ’ ಎಂದು ಸುಪ್ರಿಯೋ ಮತ್ತು ಅಭಯ್​ ಅರಿತಿದ್ದರಂತೆ. 8 ವರ್ಷಗಳ ಹಿಂದೆ ಡೇಟಿಂಗ್ ಆ್ಯಪ್ ಮೂಲಕ ಇಬ್ಬರೂ ಪರಸ್ಪರ ಭೇಟಿಯಾಗಿದ್ದರು. ಆ ಸ್ನೇಹ ಪ್ರೇಮಕ್ಕೆ ತಿರುಗಿ ಅಂದಿನಿಂದ ಇಬ್ಬರೂ ಒಟ್ಟಿಗೆ ವಾಸಿಸಲು ಆರಂಭಿಸಿದ್ದಾರೆ. 


ಇದೀಗ ಇಬ್ಬರೂ ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದು, ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿದ್ದಾರೆ.  ಹೈದರಾಬಾದ್‌ನಲ್ಲಿ ಸುಪ್ರಿಯೋ ವೃತ್ತಿ ನಿರ್ವಹಿಸುತ್ತಿದ್ದರೆ, ಪಂಜಾಬ್ ಮೂಲದ ಅಭಯ್ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿವಾಹದ ನಿಮಿತ್ತ ಹೈದರಾಬಾದ್​ನ ಖಾಸಗಿ ರೆಸಾರ್ಟ್‌ ಒಂದರಲ್ಲಿ ಆಯೋಜಿಸಿದ್ದ ಮೆಹೆಂದಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡ ಈ ಜೋಡಿಯ ಮುಖದಲ್ಲಿ ಸಂಭ್ರಮ ಮನೆ ಮಾಡಿತ್ತು. 

ಸಲಿಂಗಿಗಳ ಈ ವಿವಾಹ ಕಾರ್ಯಕ್ರಮದಲ್ಲಿ ಹೈದರಾಬಾದ್‌ನ ಕೆಲ ತೃತೀಯಲಿಂಗಿಗಳೂ ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದ್ದಾರೆ. ಇನ್ನು ತಮ್ಮ ವಿವಾಹದ ಬಗ್ಗೆ ನೂರಾರು ಕನಸುಗಳನ್ನು ಕಂಡಿದ್ದ ಸುಪ್ರಿಯೋ ಮತ್ತು ಅಭಯ್ ಇಬ್ಬರೂ ಧರಿಸಿದ ಡ್ರೆಸ್​ಗಳ ಡಿಸೈನ್​ ಪಂಜಾಬ್ ಮತ್ತು ಕೋಲ್ಕತ್ತಾದಲ್ಲಿ ಮಾಡಿಸಿಕೊಂಡಿದ್ದಂತೆ. 

ಇನ್ನು ಸಲಿಂಗಿಗಳ ವಿವಾಹ ಭಾರತದಲ್ಲಿ ಕಾನೂನಾತ್ಮವಾಗಿ ಸಿಂಧು ಆಗುವುದಿಲ್ಲ. ಸಲಿಂಗಿಗಳ ಪ್ರೀತಿಗೆ ಒಪ್ಪಿಗೆ ಇದೆ, ಆದರೆ ಮದುವೆಗೆ ಇಲ್ಲ. ಆದ್ದರಿಂದ ಸುಪ್ರಿಯೋ ಮತ್ತು ಅಭಯ್​ರ ಮದುವೆ ಭಾರೀ ಚರ್ಚೆಗೆ ಗ್ರಾಸವಾಗಿದೆ.