ಬ್ರಿಟನ್‌ ನ ಅತ್ಯಂತ ದುಬಾರಿ ಡೈವರ್ಸ್: ದುಬೈ ದೊರೆಯಿಂದ 6ನೇ ಪತ್ನಿಗೆ 5,527 ಕೋಟಿ ರೂ. ಜೀವನಾಂಶಕ್ಕೆ ಕೋರ್ಟ್ ಆದೇಶ

ಲಂಡನ್‌ : ದುಬೈ ದೇಶದ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ತಮ್ಮ ಆರನೇ ಪತ್ನಿ, ರಾಜಕುಮಾರಿ ಹಯಾ ಬಿಂಟ್‌ ಅಲ್ ಹುಸೇನ್‌ಗೆ ನೀಡಿರುವ ವಿಚ್ಛೇದನ ಇತ್ಯರ್ಥವಾಗಿ ಅಂತಿಮ ಹಂತಕ್ಕೆ ತಲುಪಿದೆ. ಆಕೆಗೆ ಪತಿ 5,527 ಕೋಟಿ ರೂ. ಜೀವನಾಂಶ ನೀಡುವಂತೆ ಬ್ರಿಟನ್‌ ನ್ಯಾಯಾಲಯ ಆದೇಶ ನೀಡಿದೆ.

ಇದರಲ್ಲಿ 2,521 ಕೋಟಿ ರೂ.ಗಳನ್ನು ಪೂರ್ಣವಾಗಿ ಒಂದೇ ಮೊತ್ತದಲ್ಲಿ ಹಯಾ ಬಿಂಟ್‌ ಅಲ್ ಹುಸೇನ್‌ಗೆ ಪಾವತಿಸಬೇಕು ಎಂದು ಆದೇಶಿಸಿದೆ. ರಶೀದ್ ಪತ್ನಿಯರ ಪೈಕಿ ಹಯಾ ಕಿರಿಯವರಾಗಿದ್ದಾರೆ. ಈ ದಂಪತಿಗೆ ಅಲ್ ಜಲಿಲಿಯಾ(14), ಜಯದ್ (9) ಎಂಬ ಈರ್ವರು ಮಕ್ಕಳಿದ್ದಾರೆ. ಈ ಮಕ್ಕಳ ಶಿಕ್ಷಣಕ್ಕೆಂದು 96 ಕೋಟಿ ರೂ. ನೀಡಬೇಕು. ಅಲ್ಲದೆ ಮಕ್ಕಳೀರ್ವರು ಅಪ್ರಾಪ್ತರಾಗಿದ್ದು, ಅವರ ಜವಾಬ್ದಾರಿ ನಿಭಾಯಿಸಲು 112 ಕೋಟಿ ರೂ. ವಾರ್ಷಿಕವಾಗಿ ನೀಡಬೇಕಿದೆ ಎಂದು ಕೋರ್ಟ್‌ ಹೇಳಿದೆ. 

ಮಕ್ಕಳು ಪಡೆಯುವ ಒಟ್ಟು ಮೊತ್ತವು ಹೆಚ್ಚು ಅಥವಾ ಕಡಿಮೆ ಆಗಿರಬಹುದು. ಆದರೆ, ಅವರು ಎಷ್ಟು ಕಾಲ ಬದುಕುತ್ತಾರೆ ಹಾಗೂ ಅವರು ತಮ್ಮ ತಂದೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಾರೆಯೇ ಎಂಬ ಅಂಶಗಳ ಮೇಲೆ ಪರಿಹಾರ ಅವಲಂಬಿತವಾಗಿರುತ್ತದೆ. ಇತರೆ ಅಗತ್ಯತೆಗಳಿಗೆ 2,907 ಕೋಟಿ ರೂ.ಗಳನ್ನು ಬ್ಯಾಂಕ್ ಗ್ಯಾರಂಟಿಯಾಗಿ ನೀಡಬೇಕಾಗುತ್ತದೆ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. 

ಸದ್ಯ ಬ್ರಿಟನ್ ಇತಿಹಾಸದಲ್ಲಿಯೇ ಇದೊಂದು ಅತ್ಯಂತ ದುಬಾರಿ ವಿಚ್ಛೇದನವಾಗಿದೆ ಎಂದು ಹೇಳಲಾಗಿದೆ. 72 ವರ್ಷ ವಯಸ್ಸಿನ ಶೇಖ್ ಮೊಹಮ್ಮದ್, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉಪಾಧ್ಯಕ್ಷರಾಗಿದ್ದಾರೆ ಮತ್ತು ಪ್ರಧಾನಮಂತ್ರಿಯಾಗಿದ್ದಾರೆ. ಪ್ರಮುಖ ಕುದುರೆ ತಳಿಗಳನ್ನು ಹೊಂದಿರುವ ಅವರು ಗೊಡಾಲ್ಫಿನ್ ಕುದುರೆ-ರೇಸಿಂಗ್ ಸ್ಟೇಬಲ್​ನ ಸ್ಥಾಪಕರಾಗಿದ್ದಾರೆ. ರಾಣಿ ಎಲಿಜಬೆತ್ ರೊಂದಿಗೂ ಶೇಖ್‌ ಮೊಹಮ್ಮದ್‌ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. 

2019ರಲ್ಲಿ ಹಯಾ ಬಿಂಟ್‌ ಅಲ್ ಹುಸೇನ್‌ಗೆ ಬ್ರಿಟನ್‌ಗೆ ಓಡಿ ಹೋಗಿ ಬ್ರಿಟಿಷ್ ನ್ಯಾಯಾಲಯಗಳ ಮೂಲಕ ತನ್ನ ಇಬ್ಬರು ಮಕ್ಕಳ ಪಾಲನೆಯನ್ನು ಕೋರಿದ್ದರು. ಜೋರ್ಡಾನ್‌ನ ಮಾಜಿ ದೊರೆ ಹುಸೇನ್ ಅವರ ಪುತ್ರಿಯಾಗಿದ್ದ ರಾಜಕುಮಾರಿ ಹಯಾ ತನ್ನ ಪತಿಯಿಂದ ತಾನು ಭೀತಿಗೊಳಗಾಗಿದ್ದೇನೆ ಎಂದು ಆರೋಪಿಸಿದ್ದರು.