ಕೋತಿಮರಿಯನ್ನು ಹತ್ಯೆಗೆ ಸೇಡು ತೀರಿಸಿಕೊಂಡ ಮಂಗಗಳ ಹಿಂಡು: 250 ನಾಯಿಗಳ ಬೇಟೆ!

ಮುಂಬೈ: ಕೋತಿಮರಿಯನ್ನು ಕೊಂದಿರುವ ಸೇಡು ತೀರಿಸಿಕೊಳ್ಳಲು‌‌ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್ಗಾವ್​ನಲ್ಲಿ ಕೋತಿಗಳ ಹಿಂಡೊಂದು ಈವರೆಗೆ ಸುಮಾರು 250 ನಾಯಿಗಳನ್ನು ಸಾಯಿಸಿವೆ ಎಂದು ವರದಿಯಾಗಿದೆ.

ಕಳೆದ ತಿಂಗಳಿಂದ ಮಂಗಗಳ ಹಿಂಡು ನಾಯಿಮರಿಗಳನ್ನು ಎತ್ತಿಕೊಂಡು ಹೋಗುತ್ತಿದ್ದು, ಅವುಗಳನ್ನು ಕಟ್ಟಡ ಅಥವಾ ಮರಗಳ ಮೇಲಕ್ಕೆ ಎಳೆದುಕೊಂಡು ಹೋಗಿ ಕೆಳಗೆ 
ಬೀಳಿಸುತ್ತಿವೆ. ಈ ಬಗ್ಗೆ ಸ್ಥಳೀಯರು ದೂರು ನೀಡಿರುವ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಕೋತಿಗಳನ್ನು ಹಿಡಿದಿದ್ದಾರೆ.ಅದೇ  ಗ್ರಾಮದ ನಿವಾಸಿ ಸೀತಾರಾಂ ನೈಬಲ್ ಎಂಬುವರ ನಾಯಿಮರಿಯನ್ನು 15 ದಿನಗಳ ಹಿಂದೆ ಮಂಗವೊಂದು ಎಳೆದುಕೊಂಡು ಹೋಗುತ್ತಿತ್ತು.  ಆಗ ನಾಯಿಮರಿ ಕಿರುಚಲು ಆರಂಭಿಸಿದೆ. ತಕ್ಷಣ ನೈಬಲ್ ನಾಯಿಮರಿಯನ್ನು ಕೋತಿಯಿಂದ ಉಳಿಸಿದ್ದಾರೆ. ಆಗ ಅವರು ತಮ್ಮ ಕಾಲು ಮುರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. 

ಒಂದು ತಿಂಗಳ ಹಿಂದೆ, ಹಳ್ಳಿಯ ಕೆಲವು ನಾಯಿಗಳು ಸೇರಿ ಕೋತಿಮರಿಯೊಂದನ್ನು ಸಾಯಿಸಿದ್ದವು. 
ಈ ಸೇಡು ತೀರಿಸಿಕೊಳ್ಳಲು ಕೋತಿಗಳು 
ನಾಯಿಮರಿಗಳ ಪ್ರಾಣ ತೆಗೆಯುತ್ತಿವೆ. ಗ್ರಾಮದಲ್ಲಿ ಈಗ ನಾಯಿಗಳೇ ಇಲ್ಲದಂತಾಗಿದ್ದು, ಕೋತಿಗಳು ಮಕ್ಕಳ ಮೇಲೆರಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.