ಜೈಲಿನಲ್ಲಿದ್ದೇ ಈತ ಸಂಪಾದಿಸಿದ್ದು ಬರೋಬ್ಬರಿ 215 ಕೋಟಿ ರೂ.!: ಇಂತಪ್ಪ ಸುಕೇಶ್ ಸ್ಟೋರಿ ಒಟಿಟಿಯಲ್ಲಿ ಸೀರೀಸ್ ಮಾಡಲು ನಿರ್ಮಾಪಕರು ತುದಿಗಾಲಲ್ಲಿ

ಮುಂಬೈ: ಸುಕೇಶ್‌ ಚಂದ್ರಶೇಖರ್ ಎಂಬ ಹೆಸರು ಒಂದೆರಡು ತಿಂಗಳಿನಿಂದ ಭಾರೀ ಸುದ್ದಿಯಲ್ಲಿದೆ. 25 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಯದಿಂದ(ಇಡಿ) ವಿಚಾರಣೆ ಎದುರಿಸುತ್ತಿರುವ ಈ ಖತರ್ನಾಕ್ ಭೂಪನ ಲೈಫ್ ಸ್ಟೋರಿಯೇ ರೋಚಕವಾಗಿದೆ. ಇದೀಗ ಈತನ ಬಗ್ಗೆ ಓಟಿಟಿಯಲ್ಲಿ ಸಿರೀಸ್‌ ಮಾಡಲು ನಿರ್ಮಾಪಕರು ತುದಿಗಾಲಿನಲ್ಲಿ ನಿಂತಿದ್ದಾರಂತೆ.

ಬಾಲಿವುಡ್‌ ಬೆಡಗಿಯರಾದ ಜಾಕ್ವಿಲಿನ್‌ ಫರ್ನಾಂಡಿಸ್‌, ಅದಿತಿ, ನೋರಾ ಫತೇಹಿ ಸೇರಿದಂತೆ ಹಲವರನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ಈತನ ಜೀವನ ಕಥೆಯೂ ಅಷ್ಟೇ ಕುತೂಹಲವಾಗಿದೆ. ಈತನಲ್ಲಿರುವ ಕೋಟಿ ಕೋಟಿ ರೂ. ಆಸ್ತಿಯನ್ನು ಕಂಡು ಬಾಲಿವುಡ್ ಸುಂದರಿಯರೂ ಇವನ ಬಳಿಗೆ ಹೋಗುತ್ತಿದ್ದರು. ಪರಿಣಾಮ ಇದೀಗ ಅವರು ಕೂಡಾ ಇಡಿಯಿಂದ ತನಿಖೆ ಎದುರಿಸುವಂತಾಗಿದೆ.

ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿರುವ ಈ ಖದೀಮ ದ್ವಿತೀಯ ಪಿಯುಸಿ ಕ್ಲಾಸಿಗೇ ಡ್ರಾಪ್‌ಔಟ್‌ ಆಗಿದ್ದವ. ಆದರೆ ಕೋಟಿ ಕೋಟಿ ಆಸ್ತಿಯ ಒಡೆಯನಾಗಿರುವ ಹಿಂದೆ ಒಂದು ವಿಚಿತ್ರ ಕಥೆಯೇ ಇದೆ. ಸಣ್ಣ ವಯಸ್ಸಿಗೇ ಐಷಾರಾಮಿ ಜೀವನದ ಕನಸು ಕಂಡಿದ್ದ ಸುಕೇಶ್‌ ಚಂದ್ರಶೇಖರ್. ಹಲವಾರು ವ್ಯವಹಾರ ಮಾಡಿದ ಆದರೆ ಬರೀ ಕೈಸುಟ್ಟುಕೊಂಡಿದ್ದೇ ಬಂತು. ಆದರೆ ಕೊನೆಗೇ ಈತನ ಕೈಹಿಡಿದದ್ದು ಮೋಸದ ಜಾಲ. ಪರಿಣಾಮ ಹಲವಾರು ಬಾರಿ ಜೈಲಿಗೆ ಹೋಗಿ ಬಂದಿದ್ದ. ಆದರೆ ಜೈಲಿನಿಂದ ಹೊರಗಡೆ ಬಂದು ಈತ ಮಾಡುತ್ತಿದ್ದುದು ಮತ್ತದೇ ಕೆಲಸ.

ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿ ಇದ್ದುಕೊಂಡೇ ಭಾರಿ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದನಂತೆ. ಈತ ಎಂತಹ ಖತರ್ನಾಕ್ ಖದೀಮನೆಂದರೆ ಜೈಲಿನಲ್ಲಿಯೇ ಇದ್ದುಕೊಂಡೇ 215 ಕೋಟಿ ರೂ. ಸಂಪಾದಿಸಿದ ಎಂದರೆ ಯಾರಾದರೂ ನಂಬುವಂತಹ ವಿಚಾರವೇ?. ಆದರೂ ನಂಬಲೇಬೇಕು. ಏಕೆಂದರೆ ಇದು ಸತ್ಯ. 

ಆಗಿದ್ದೇನೆಂದರೆ, ಫಾರ್ಮಾ ಕಂಪೆನಿಯೊಂದರ ಮಾಲಕ ಶುವೇಂದರ್‌ ಸಿಂಗ್‌ ಎಂಬಾತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿದ್ದ. ಈತ ನೂರಾರು ಕೋಟಿ ರೂ‌.ಗಳ ಒಡೆಯ. ಈತನ ಪರಿಚಯ ಸುಕೇಶ್‌ ಚಂದ್ರಶೇಖರ್ ಗೆ ಆಗಿದೆ. ಅಲ್ಲಿಂದಲೇ ತನ್ನ ಭವಿಷ್ಯದ ಬಗ್ಗೆ ಚಿಂತನೆ ಮಾಡಲು ಆಭಿಸಿದ್ದಾನಂತೆ ಆಸಾಮಿ. ಅದಾಗಲೇ ವಿವಿಧ ತಂತ್ರಜ್ಞಾನದಲ್ಲಿ ಪಳಗಿದ್ದ ಸುಕೇಶ್‌ ಚಂದ್ರಶೇಖರ್, ದೊಡ್ಡ ದೊಡ್ಡ ರಾಜಕಾರಣಿಗಳ, ಸಚಿವರ ಮನೆ ಹಾಗೂ ಕಚೇರಿಗಳ ಫೋನ್‌ ಹ್ಯಾಕಿಂಗ್‌ ಮಾಡುವ ತಂತ್ರಜ್ಞಾನದಲ್ಲಿ ಪಳಗಿಬಿಟ್ಟಿದ್ದ. 

ಫೋನ್‌ ಕರೆ ಸ್ವೀಕರಿಸಿದವರಿಗೆ ಈ ಕರೆಯು ರಾಜಕಾರಣಿಗಳ ಕಚೇರಿಯಿಂದಲೇ ಬಂದಿದೆ ಎನ್ನುವ ರೀತಿಯಲ್ಲಿಯೇ ಡಿಸ್‌ಪ್ಲೇ ಆಗುವ ತಂತ್ರಜ್ಞಾನವಿದು. ಈತನಿಗೆ ಜೈಲಿನಲ್ಲಿ ಇದ್ದುಕೊಂಡೇ ಇದಕ್ಕೆ ಸಹಾಯ ಮಾಡುತ್ತಿದ್ದವರು ವಿವಿಧ ಪ್ರಕರಣಗಳಲ್ಲಿ ಜೈಲು ಪಾಲು ಆಗಿರುವ ಸರ್ಕಾರಿ ಅಧಿಕಾರಿಗಳು. ಅವರಿಗೆ ಬೇಕಾದಷ್ಟು ದುಡ್ಡು ಕೊಟ್ಟು ಜೈಲಿನಲ್ಲಿಯೇ ಅವರನ್ನು ಖರೀದಿ ಮಾಡುತ್ತಿದ್ದ ಸುಕೇಶ್‌.
 
ಇದೇ ತಂತ್ರಜ್ಞಾನ ಬಳಸಿಕೊಂಡು ಗೃಹ ಇಲಾಖೆ ಹಾಗೂ ಕಾನೂನು ಇಲಾಖೆಗಳ ಫೋನ್‌ಗಳನ್ನು ಹ್ಯಾಕ್‌ ಮಾಡಿ, ಉದ್ಯಮಿ ಶುವೇಂದರ್‌ ಸಿಂಗ್‌ ಪತ್ನಿಗೆ ಕರೆ ಮಾಡಿದ್ದಾನೆ. ಆಕೆ ಹೇಗಾದರೂ ಮಾಡಿ ಪತಿಯನ್ನು ಜೈಲಿನಿಂದ ಬಿಡಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಳು. ಅದನ್ನೇ ಬಂಡವಾಳ ಮಾಡಿಕೊಂಡ ಸುಕೇಶ್‌ ಚಂದ್ರಶೇಖರ್ ಆಕೆಗೆ ಕರೆ ಮಾಡಿ, "ತಾವು ಗೃಹ ಇಲಾಖೆ, ಕಾನೂನು ಇಲಾಖೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಇಷ್ಟು ಹಣ ಕೊಟ್ಟಲ್ಲಿ ಶುವೇಂದರ್‌ ಸಿಂಗ್‌ ಅನ್ನು ಜೈಲಿನಿಂದ ಬಿಡುಗಡೆಗೊಳಿಸುತ್ತೇವೆ" ಎಂದು ಹೇಳಿದ್ದಾನೆ. 

ಈ ಸಂಖ್ಯೆಗಳನ್ನು ನೋಡಿರುವ ಪತ್ನಿ ಅದು ನಿಜವೆಂದೇ ನಂಬಿ ತಮ್ಮಲ್ಲಿದ್ದ ಆಸ್ತಿ ಪಾಸ್ತಿ, ಚಿನ್ನಾಭರಣ ಎಲ್ಲವನ್ನೂ ಮಾರಿ 215 ಕೋಟಿ ರೂ. ನೀಡಿದ್ದಾರೆ. ಇದೇ ಹಣದಲ್ಲಿ ತನಗೆ ಬೇಕಾದ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡಿದ್ದ ಸುಕೇಶ್‌ ಬಾಲಿವುಡ್‌ ಸುಂದರಿಯರನ್ನು ಹತ್ತಿರಕ್ಕೆ ಸೆಳೆಯುವ ಕಾರ್ಯವನ್ನು ಶುರುಹಚ್ಚಿಕೊಂಡಿದ್ದಾನೆ. 

ಈತನ ಐಷಾರಾಮಿ ಮನೆ, ಕಾರು, ಬಂಗಲೆ ಎಲ್ಲವನ್ನೂ ನೋಡಿದ ಬೆಡಗಿಯರು ಅನಾಮತ್ತಾಗಿ ಬಲೆಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ಇದೇ ಸಮಯದಲ್ಲಿ ಇವನಿಗೆ ಶ್ರೀಲಂಕಾ ಮೂಲದ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌ ಮೇಲೆ ಮನಸ್ಸಾಗಿದೆ. ಗೃಹ ಸಚಿವ ಅಮಿತ್‌ ಷಾ ಕಚೇರಿಯಿಂದ ಕರೆ ಮಾಡುವುದಾಗಿ ಹೇಳಿ ನಟಿಯನ್ನು ಸೆಳೆದುಕೊಳ್ಳುವಲ್ಲಿ ಈತ ಸಫಲನಾಗಿದ್ದಾನೆ. ಆಕೆಗಾಗಿ ಲಕ್ಷ ಲಕ್ಷ ರೂ‌. ಗಿಫ್ಟ್‌ ಕೊಟ್ಟಿದ್ದಾನೆ. 52 ಲಕ್ಷ ರೂ.‌ ಕುದುರೆಯನ್ನೂ ಖರೀದಿಸಿ ಕೊಟ್ಟಿದ್ದಾನೆ. ಲಕ್ಸುರಿ ಮಾಲ್‌ಗಳಲ್ಲಿ ಷಾಪಿಂಗ್‌ ಮಾಡಿಸಿ ಅದರ ಬಿಲ್‌ ಗಳನ್ನು ತಾನೇ ನೀಡಿದ್ದಾನೆ. ಇದೇ ರೀತಿ ವಿವಿಧ ಬಾಲಿವುಡ್‌ ನಟಿಯರಿಗೂ ಗಿಫ್ಟ್‌ ಆಮಿಷವನ್ನೊಡ್ಡಿ ಅವರನ್ನು ಬಲೆಗೆ ಬೀಳಿಸಿಕೊಂಡಿದ್ದಾನೆ. 

ವಿಚಿತ್ರವೆಂದರೆ ಇವುಗಳಿಗೆಲ್ಲಾ ಈತನ ಪತ್ನಿಯೂ ಸಾಥ್‌ ನೀಡುತ್ತಿದ್ದಳಂತೆ. ಇದೀಗ ಈತನ ಒಂದೊಂದೇ ಹಗರಣಗಳೂ ಬೆಳಕಿಗೆ ಬರುತ್ತಿದೆ. ಇನ್ನೆಷ್ಟು ಈತನ ಭಯಾನಕ ಹಿಸ್ಟರಿ ಹೊರಬರಬೇಕಿದೆಯೋ ಗೊತ್ತಿಲ್ಲ. ಇದೀಗ ಸುಕೇಶ್‌ ಹಾಗೂ ಜಾಕ್ವೆಲಿನ್‌‌ ಫರ್ನಾಂಡೀಸ್ ಕಥೆಯನ್ನು ಸಿನಿಮಾ ಮಾಡಲು ಹಾಗೂ ಓಟಿಟಿಯಲ್ಲಿ ಸಿರೀಸ್‌ ಮಾಡಲು ನಿರ್ಮಾಪಕರು ಕಾತರರಾಗಿದ್ದಾರೆ.