100 ರೂ.ಗಾಗಿ ನಡೆದ ಜಗಳದಿಂದ ನಡೆಯಿತು ಭಾರೀ ಅನಾಹುತ: ಅಪಘಾತವೆಂದು ಕಟ್ಟಿದ್ದ ಕತೆಗೆ ಸಾವಿನ ಬಳಿಕ ಭಾರೀ ಟ್ವಿಸ್ಟ್!

ಬೆಂಗಳೂರು: ಅಪಘಾತದ ಗಾಯಾಳು ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಮೃತಪಟ್ಟಿದ್ದರು‌. ಆದರೆ ಆತನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇದು ಅಪಘಾತವಲ್ಲ ಕೊಲೆಯೆಂದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಕೊಡಿಗೆಹಳ್ಳಿ ಪೊಲೀಸರು ಎರಡು ತಿಂಗಳ ಬಳಿಕ ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಡಿಗೆಹಳ್ಳಿ ನಿವಾಸಿ ಶಂಶೀರ್ ಬಂಧಿತ ಆರೋಪಿ. ಮತ್ತಿಕೆರೆ ನಿವಾಸಿ ಪ್ರತೀಕ್ ಯಾದವ್(31) ಕೊಲೆಯಾದ ದುದೈರ್ವಿ.

ಮತ್ತಿಕೆರೆಯಲ್ಲಿದ್ದ ಕರ್ನಾಟಕ ಫೋರ್ಕ್ ಸ್ಟಾಲ್​ನಲ್ಲಿ ಆರೋಪಿ ಶಂಶೀರ್ ಕೆಲಸ ಮಾಡುತ್ತಿದ್ದ. ಶಾಪ್ ಮಾಲಕ ಸುರೇಶ್​ಗೆ ಪ್ರತೀಕ್ ಪರಿಚಯಸ್ಥನಾಗಿದ್ದ. ಕಳೆದ ಅ.17ರಂದು ಪ್ರತೀಕ್ ಫೋರ್ಕ್ ಸ್ಟಾಲ್ ಬಳಿಗೆ ಬಂದಿದ್ದ. ಆಗ ಅಲ್ಲೇ ಕೆಲಸ ಮಾಡುತ್ತಿದ್ದ ಶಂಶೀರ್ ನೊಂದಿಗೆ 100 ರೂ. ವಿಚಾರಕ್ಕಾಗಿ ಮಾತಿನ ಚಕಮಕಿ ನಡೆದಿತ್ತು. 

ಗಲಾಟೆ ಜೋರಾಗುತ್ತಿದ್ದಂತೆ ಶಂಶೀರ್ ಅಲ್ಲೇ ಇದ್ದ ತೂಕದ ಕಲ್ಲಿನಿಂದ ಪ್ರತೀಕ್ ತಲೆಗೆ  ಹೊಡೆದಿದ್ದಾನೆ‌. ಕುಸಿದು ಬಿದ್ದ ಪ್ರತೀಕ್​​ನನ್ನು ತಕ್ಷಣ ಅಂಗಡಿ ಮಾಲಕ ಸುರೇಶ್ ಹಾಗೂ ಅವರ  ಸಹೋದರ ಸುಬ್ರಮಣ್ಯ ಎಂಬುವರು ಆಟೋದಲ್ಲಿ ಕೆ.ಸಿ‌ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು.‌ ಹೊರ ರೋಗಿ ವಿಭಾಗದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ತೋರಿಸುವಂತೆ ವೈದ್ಯರು ಶಿಫಾರಸು ಮಾಡಿದ್ದರು.

ತಲೆಯಲ್ಲಿ ಆಗಿರುವ ಗಾಯದ ಬಗ್ಗೆ ಮನೆಯವರು ಪ್ರಶ್ನಿಸಿದಾಗ ಬೈಕ್​​ನಲ್ಲಿ ಹೋಗುವಾಗ ಬಿದ್ದು ಗಾಯ ಮಾಡಿಕೊಂಡಿರುವುದಾಗಿ ಪ್ರತೀಕ್ ತಿಳಿಸಿದ್ದಾನೆ.‌ ತಲೆನೋವು ಹೆಚ್ಚಾಗಿದ್ದರಿಂದ ನಿಮ್ಹಾನ್ಸ್ ಆಸ್ಪತ್ರೆಗೆ ಹೋಗಿ ಬಂದಿದ್ದ. ಅ.20 ರಂದು ಮನೆಯಲ್ಲಿದ್ದಾಗ ಏಕಾಏಕಿ ತಲೆಯಲ್ಲಿ ರಕ್ತಹೆಪ್ಪು ಗಟ್ಟಿ ಕುಸಿದುಬಿದ್ದಿದ್ದ. ಕೂಡಲೇ ಬ್ಯಾಪಿಸ್ಟ್ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. 

ಪ್ರತೀಕ್ ತಲೆಗೆ ಆಗಿರುವ ಗಾಯದ ಕುರಿತು ಅನುಮಾನ ವ್ಯಕ್ತಪಡಿಸಿ ಯಶವಂತಪುರ ಟ್ರಾಫಿಕ್ ಇನ್ಸ್​​ಪೆಕ್ಟರ್​ ರಾಘವೇಂದ್ರಗೆ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದೌಡಾಯಿಸಿದ ಪೊಲೀಸರು ಮೃತ ಕುಟುಂಬಸ್ಥರ ಹೇಳಿಕೆಯನ್ನು ದಾಖಲಿಸಿಕೊಂಡು ಅಪಘಾತವಾಗಿರುವ ಸ್ಥಳದ ಬಗ್ಗೆ‌ ಕುಲಂಕಷವಾಗಿ ಪರಿಶೀಲಿಸಿದ್ದಾರೆ‌. ಸಿಸಿಟಿವಿ ಸೇರಿದಂತೆ ಹಲವು ರೀತಿಯಲ್ಲಿ ಪರಿಶೀಲಿಸಿದರೂ ಅಪಘಾತದ ಬಗ್ಗೆ ಸುಳಿವು ದೊರರಲಿಲ್ಲ. 

ಮೃತನ‌ ಮೊಬೈಲ್​​​ಗೆ ಬಂದಿದ್ದ ಕರೆಯನ್ನು ಆಧರಿಸಿ ತನಿಖೆ ನಡೆಸಿದಾಗ ಅನುಮಾನ ಬಂದು ಅಂಗಡಿ ಮಾಲಕ ಸುರೇಶ್ ನನ್ನು ವಿಚಾರಿಸಿದ್ದಾರೆ. ಆಗ ಆರೋಪಿ ಶಂಶೀರ್ ಹಾಗೂ ಪ್ರತೀಕ್ ನಡುವೆ ಜಗಳವಾಗಿ ಹಲ್ಲೆ ಮಾಡಿರುವ ಸಂಗತಿ ಪೊಲೀಸರಿಗೆ ತಿಳಿದು ಬಂದಿದೆ. ಘಟನೆ ಬಳಿಕ ಶಂಶೀರ್ ನಾಪತ್ತೆಯಾಗಿರುವುದು ಖಚಿತವಾಗುತ್ತಿದ್ದಂತೆ ಇದೊಂದು ಅಪಘಾತವಲ್ಲ ಕೊಲೆ‌ ಎಂಬುದು ಖಚಿತವಾಗುತ್ತದೆ.

ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.