-->
'ಚರ್ಮದಿಂದ ಚರ್ಮ ಸ್ಪರ್ಶವಾಗದಿದ್ದಲ್ಲಿ ಲೈಂಗಿಕ ದೌರ್ಜನ್ಯವಲ್ಲ' ಎಂಬ ಬಾಂಬೆ ಹೈಕೋರ್ಟ್​ ತೀರ್ಪು ರದ್ದುಗೊಳಿಸಿ ಆದೇಶಿಸಿದ ಸುಪ್ರೀಂ ಕೋರ್ಟ್‌

'ಚರ್ಮದಿಂದ ಚರ್ಮ ಸ್ಪರ್ಶವಾಗದಿದ್ದಲ್ಲಿ ಲೈಂಗಿಕ ದೌರ್ಜನ್ಯವಲ್ಲ' ಎಂಬ ಬಾಂಬೆ ಹೈಕೋರ್ಟ್​ ತೀರ್ಪು ರದ್ದುಗೊಳಿಸಿ ಆದೇಶಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಇಬ್ಬರ ನಡುವೆ ಚರ್ಮದಿಂದ ಚರ್ಮ ಸ್ಪರ್ಶವಾಗದಿದ್ದಲ್ಲಿ, ಅಪ್ರಾಪ್ತೆ ಬಟ್ಟೆ ಧರಿಸಿದ್ದಾಗ ಸ್ಪರ್ಶಿಸಿದರೆ ಅದು ಲೈಂಗಿಕ ದೌರ್ಜನ್ಯವಲ್ಲ ಎಂದು ಬಾಂಬೆ ಹೈಕೋರ್ಟ್ ಈ ಹಿಂದೆ ನೀಡಿದ್ದ ವಿವಾದಾತ್ಮಕ ತೀರ್ಪನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

ಕಳೆದ ಜನವರಿ 19ರಂದು ಲೈಂಗಿಕ ಕಿರುಕುಳ ಪ್ರಕರಣವೊಂದರ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠ​ವು, ಓರ್ವ ಅಪ್ರಾಪ್ತೆ ಬಟ್ಟೆ ಧರಿಸಿರುವಾಗ ಆಕೆಯ ಎದೆಯನ್ನು ಯಾರಾದರೂ ಮುಟ್ಟಿದ್ದಲ್ಲಿ ಅಥವಾ ಅವರ ಕೈ ಎದೆಗೆ ಸ್ಪರ್ಶಿಸಿದ ತಕ್ಷಣ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆರೋಪಿ ಅಪ್ರಾಪ್ತೆ ಧರಿಸಿದ್ದ ಬಟ್ಟೆಯನ್ನು ತೆಗೆದು ಸ್ಪರ್ಶಿಸಿದರೆ ಅಥವಾ ಬಟ್ಟೆಯೊಳಗಿಂದ ಕೈ ಹಾಕಿದಲ್ಲಿ ಮಾತ್ರ ಅದನ್ನು ಲೈಂಗಿಕ ದೌರ್ಜನ್ಯ ಎನ್ನಬಹುದೆಂದು ತೀರ್ಪು ನೀಡಿ ಆರೋಪಿಯನ್ನು ದೋಷಮುಕ್ತಗೊಳಿಸಿತ್ತು.

ಈ ತೀರ್ಪಿನ ವಿರುದ್ಧ ಭಾರತದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಮಹಾರಾಷ್ಟ್ರ ರಾಜ್ಯವು ಹೈಕೋರ್ಟ್ ಸುಪ್ರೀಂಕೋರ್ಟ್​ಗೆ ಮೇಲ್ಮನವಿಗಳನ್ನು ಸಲ್ಲಿಸಿದ್ದವು. ಬಳಿಕ ಬಾಂಬೆ ಹೈಕೋರ್ಟ್​ನ ಈ ತೀರ್ಪನ್ನು ಸುಪ್ರೀಂಕೋರ್ಟ್​ ತಡೆಹಿಡಿದಿತ್ತು. 

ಈ ಸಂಬಂಧ ಇಂದು ವಿಚಾರಣೆ ನಡೆಸಿರುವ ನ್ಯಾ.ಉದಯ್ ಉಮೇಶ್ ಲಲಿತ್, ನ್ಯಾ.ಎಸ್ ರವೀಂದ್ರ ಭಟ್ ಮತ್ತು ನ್ಯಾ. ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ನ್ಯಾಯಪೀಠವು, ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಪೊಕ್ಸೊ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆದ್ದರಿಂದ ಲೈಂಗಿಕ ದೌರ್ಜನ್ಯ ಎಸಗಲು ಚರ್ಮದಿಂದ ಚರ್ಮದ ಸ್ಪರ್ಶವೇ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ಬಾಂಬೆ ಹೈಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಿದೆ.

Ads on article

Advertise in articles 1

advertising articles 2

Advertise under the article