ದೀಪಾವಳಿ ಪೂಜಾ ಸಾಮಾಗ್ರಿ ವಿಸರ್ಜಿಸಲು ಹೋದ ಸಹೋದರಿಯರೀರ್ವರು ಕೆರೆ ಪಾಲು

ಬೆಳಗಾವಿ: ಕೆರೆ, ಹೊಳೆಗಳ ಬದಿಗಳಿಗೆ ಹೋಗಿ ಮಕ್ಕಳು ನೀರು ಪಾಲಾಗುತ್ತಿರುವ ಸುದ್ದಿ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ‌. ಇಂತಹದ್ದೇ ಒಂದು ದುರಂತ ಬೆಳಗಾವಿ ಜಿಲ್ಲೆಯ ಸಾಂಬ್ರಾ ಗ್ರಾಮದಲ್ಲಿ ನಡೆದಿದೆ. ವಿಪರ್ಯಾಸವೆಂದರೆ ಇಲ್ಲಿ ಒಡಹುಟ್ಟಿದ ಸಹೋದರಿಯರೀರ್ವರು ನೀರು ಪಾಲಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ನೇತ್ರಾ ಈರಣ್ಣ(8) ಕೊಳವಿ ಹಾಗೂ ಪ್ರಿಯಾ ಈರಣ್ಣ ಕೊಳವಿ(6) ನೀರುಪಾಲಾಗಿರುವ ಸಹೋದರಿಯರು.

ಈ ಇಬ್ಬರು ಬಾಲಕಿಯರು ತಮ್ಮ ಹಿರಿಯ ಸಹೋದರಿಯೊಂದಿಗೆ ದೀಪಾವಳಿ ಹಬ್ಬದ ಪೂಜಾ ಸಾಮಾಗ್ರಿಗಳನ್ನು ವಿಸರ್ಜಿಸಲು ಇಲ್ಲಿನ ಬಾಳೆಗಿಡ ಕೆರೆಗೆ ಹೋಗಿದ್ದರು.  ಈ ಸಂದರ್ಭ ಈ ದುರಂತ ಸಂಭವಿಸಿದೆ. 

ಹಿರಿಯ ಸಹೋದರಿ ನೋಡು ನೋಡುತ್ತಿದ್ದಂತೆ ತಂಗಿಯರು ಕೆರೆಗೆ ಬಿದ್ದಿದ್ದಾರೆ. ಆಕೆ ತಕ್ಷಣ ಬೊಬ್ಬೆಯಿಟ್ಟಿದ್ದಾಳೆ. ಸ್ಥಳೀಯರು ರಕ್ಷಣೆಗೆ ಧಾವಿಸಿದ್ದರೂ ಅವರ ಜೀವ ಉಳಿಸಲು ಸಾಧ್ಯವಾಗಿಲ್ಲ. ಸ್ಥಳೀಯ ಈಜುಗಾರರು ಮೃತದೇಹವನ್ನು ಮೇಲಕ್ಕೆತ್ತಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಬಗ್ಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.