ತಂದೆಯ ಮೃತದೇಹದೊಂದಿಗೆ ಮೂರು ತಿಂಗಳುಗಳ ಕಾಲ ಕಳೆದ ಪುತ್ರ: ನಾರಲು ತೊಡಗಿದಾಗ ಭಯಾನಕ ಪ್ರಕರಣ ಬಯಲು

ಕೋಲ್ಕತಾ: ತಂದೆಯ ಮೃತದೇಹವನ್ನಿರಿಸಿ ವ್ಯಕ್ತಿಯೊಬ್ಬ ಅದರೊಂದಿಗೆ ಮೂರು ತಿಂಗಳು‌ ಕಾಲ ಕಳೆದ ವಿಚಿತ್ರ ಘಟನೆಯೊಂದು ಕೋಲ್ಕತಾದಲ್ಲಿ ನಡೆದಿದೆ.

 ಸಂಗ್ರಾಮ್‌ ಡೇ(70) ಮೃತಪಟ್ಟಿದ್ದು, ಅವರ ಪುತ್ರ ಕೌಶಿಕ್‌(40) ಮೃತದೇಹವನ್ನಿರಿಸಿ ಅದರೊಂದಿಗೆ ವಾಸಿಸಿರುವಾತ. ಪೊಲೀಸರು ಇದೀಗ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

ಮುಂಬೈನ ಬಾಬಾ ಅಟೋಮಿಕ್​ ರಿಸರ್ಚ್​ ಸೆಂಟರ್​​ನಲ್ಲಿ ವೃತ್ತಿ ನಿರ್ವಹಿಸುತ್ತಿದ್ದ ಸಂಗ್ರಾಮ್​ ಡೇ ವಯೋಸಹಜ ಸಮಸ್ಯೆಯಿಂದ ಮೃತಪಟ್ಟಿದ್ದರು. ಮನೆಯಲ್ಲಿ ಸಂಗ್ರಾಮ್‌ ಡೇಯವರ ಪತ್ನಿ ಅರುಣಾ ಹಾಗೂ ಪುತ್ರ ಕೌಶಿಕ್ ಇದ್ದರು. ಆದರೆ ಅರುಣಾ ವಿಪರೀತ ಅನಾರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದರು. ಅವರ ಪುತ್ರ ಕೌಶಿಕ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಎನ್ನಲಾಗಿದೆ. 

ತಂದೆ ಸಂಗ್ರಾಮ್ ಡೇ ಮೃತಪಟ್ಟಿರುವ ವಿಚಾರವನ್ನು ಪುತ್ರ ಕೌಶಿಕ್ ತಾಯಿಗೆ ತಿಳಿಸಿರಲಿಲ್ಲ. ಬೇರೆಯವರಿಗೂ ಮೃತಪಟ್ಟ ವಿಚಾರವನ್ನು ತಿಳಿಸಿರಲಿಲ್ಲ. ಜೊತೆಗೆ ಏನು ಮಾಡಬೇಕು ಎಂದು ತಿಳಿಯದೇ, ಮೃತದೇಹದ ಅಂತ್ಯಕ್ರಿಯೆಯನ್ನೂ ನಡೆಸಲು ತಿಳಿಯದೆ ಅದರ ಜತೆಗೇ ಮೂರು ತಿಂಗಳು ಕಾಲ ಕಳೆದಿದ್ದಾನೆ.

ಮನೆಯಿಂದ ಕೊಳೆತ ವಾಸನೆ ಬರುವಾಗ ಹಾಗೂ ಸಂಗ್ರಾಮ್​ ಡೇ ಮನೆಯಿಂದ ಹೊರಕ್ಕೆ ಬಾರದಿರುವುದನ್ನು ಕಂಡ ಜನರು ಮನೆಗೆ ಹೋಗಿ ನೋಡಿದಾಗಲೇ ಈ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಮೃತದೇಹ ಕೊಳೆತು ಅಸ್ಥಿಪಂಜರ ಮಾತ್ರ ಉಳಿದುಕೊಂಡಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಂಗ್ರಾಮ್ ಡೇ ಮಡಿದು ಮೂರು ತಿಂಗಳ ಮೇಲಾಗಿದೆ ಎನ್ನಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಸಹಜ ಸಾವು ಎಂದೆನ್ನಿಸುತ್ತದೆ. ಶವ ಮಹಜರು ವರದಿ ಬಂದ ಬಳಿಕವೇ ಎಲ್ಲದ್ದಕ್ಕೂ ಉತ್ತರ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ. 

ಈ ಮೂರು ತಿಂಗಳು ಪತ್ನಿಗೂ ವಿಚಾರ ತಿಳಿಯದಿದ್ದುದು ಹೇಗೆ. ಇಷ್ಟು ದಿನ ಅವರು ಏನು ಮಾಡುತ್ತಿದ್ದರು ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಆ ಬಳಿಕವೇ ಎಲ್ಲದಕ್ಕೂ ಉತ್ತರ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.