ಮಹಿಳೆಗೆ ಡ್ರಾಪ್ ನೀಡುವುದಾಗಿ ಹೇಳಿ‌ ಮಾಡಬಾರದ್ದನ್ನು ಮಾಡಿ ಪರಾರಿಯಾದ ಅಪರಿಚಿತರು!

ಬೆಂಗಳೂರು: ಮಹಿಳೆಯೋರ್ವರನ್ನು ಡ್ರಾಪ್​ ಕೊಡುವುದಾಗಿ ನಂಬಿಸಿದ ಅಪರಿಚಿತರೀರ್ವರು ಬೈಕ್​ನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರವಲಯದ ನೀಲಗಿರಿ ತೋಪಿನಲ್ಲಿ ಈ ಅತ್ಯಾಚಾರ ನಡೆದಿದೆ. ಈ ಬಗ್ಗೆ ಸಂತ್ರಸ್ತ ಮಹಿಳೆಯ ಪೋಷಕರು ದೂರು ನೀಡಿ 10 ದಿನ ಕಳೆದರೂ ಆರೋಪಿಗಳನ್ನು ಈವರೆಗೆ ಬಂಧಿಸಿಲ್ಲ ಎಂದು ದೂರಿದ್ದಾರೆ.

38 ವರ್ಷದ ಅವಿವಾಹಿತೆ ಸಂತ್ರಸ್ತೆಯ ಮೇಲೆ ನ.14ರಂದು ಅಪರಿಚಿತರು ಅತ್ಯಾಚಾರ ನಡೆಸಿದ್ದರು. ಅಂದು ವಾಕಿಂಗ್ ಗೆಂದು ಹೋಗಿದ್ದ ಮಹಿಳೆ ವಾಪಸ್ ಮನೆಗೆ ಮರಳುವ ಸಂದರ್ಭ ಅಲ್ಲಿಗೆ ಬೈಕ್ ನಲ್ಲಿ ಬಂದ ಅಪರಿಚಿತರೀರ್ವರು ಆಕೆಯನ್ನು ಮನೆ ಬಳಿ ಬಿಡುವುದಾಗಿ ಹೇಳಿ ಬೈಕ್​ನಲ್ಲಿ ಕೂರಿಸಿಕೊಂಡಿದ್ದರು. 

ಪ್ರತ್ಯೇಕ ಬೈಕ್​​ಗಳಲ್ಲಿ ಬಂದಿದ್ದ ಈ ಅಪರಿಚಿತರು ಆಕೆಯನ್ನು ತೋಪೊಂದಕ್ಕೆ ಕರೆದೊಯ್ದು ಮಧ್ಯರಾತ್ರಿವರೆಗೂ ನಿಂತರ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಳಿಕ ಆಕೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. 

ಇತ್ತ ರಾತ್ರಿ ಹತ್ತು ಗಂಟೆಯಾದರೂ ಮಗಳು ಮನೆಗೆ ಬಾರದಿರುವುದರಿಂದ ಪಾಲಕರು ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಬಳಿಕ ಸ್ಥಳೀಯರ ಸಹಕಾರದಿಂದ ಸಂತ್ರಸ್ತೆ ತೋಪಿನಿಂದ ಮನೆಗೆ ಮರಳಿದ್ದರು. ಮುಂಜಾನೆ ಮೂರು ಗಂಟೆ ವೇಳೆಗೆ ಮನೆಗೆ ಬಂದ ಮಗಳನ್ನು ಪೋಷಕರು ವಿಚಾರಿಸಿದಾಗ ಅತ್ಯಾಚಾರ ಪ್ರಕರಣ ಬಯಲಿಗೆ ಬಂದಿತ್ತು. 

ಈ ಸಂಬಂಧ ಸಂತ್ರಸ್ತೆಯ ತಂದೆ ಹೊಸಕೋಟೆ ಪೊಲೀಸರಿಗೆ ನ. 15ರಂದು ದೂರು ನೀಡಿದ್ದರು. ನ. 16ರಂದು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಪ್ರಕರಣ ದಾಖಲಾಗಿ 10 ದಿನಗಳು ಕಳೆದರೂ ಯಾವುದೇ ಕ್ರಮ ಜರುಗಿಲ್ಲ ಎಂದು ಸಂತ್ರಸ್ತೆಯ ಪಾಲಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.