ಯುವತಿಯನ್ನು ಅಪಹರಿಸಿ ಪ್ರಜ್ಞೆ ತಪ್ಪುವ ಔಷಧಿ ನೀಡಿ ಕಾಮುಕರಿಬ್ಬರಿಂದ ಸಾಮೂಹಿಕ ಅತ್ಯಾಚಾರ


(ಉತ್ತರ ಪ್ರದೇಶ): ಯುವತಿಯೋರ್ವಳನ್ನು ಅಪಹರಿಸಿ ಪ್ರಜ್ಞೆ ತಪ್ಪುವ ಔಷಧಿ ನೀಡಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಬರ್ಹಾನ್​​​​​ ಕ್ಷೇತ್ರದ ಗ್ರಾಮವೊಂದರಲ್ಲಿ ನಡೆದಿದೆ.

ಯುವತಿ ಜಮೀನಿನಿಂದ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಆಕೆಯನ್ನು ಕಾಮುಕರಿಬ್ಬರು ಅಪಹರಿಸಿದ್ದಾರೆ.  ಬಳಿಕ ಪ್ರಜ್ಞೆ ತಪ್ಪುವ ಔಷಧಿ ನೀಡಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ‌ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಆರೋಪಿಗಳಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.

ಯುವತಿಯು ತನ್ನ ಕುಟುಂಬದವರೊಂದಿಗೆ ಜಮೀನಿಗೆ ತೆರಳಿದ್ದಳು. ಅಲ್ಲಿಂದ ಮಧ್ಯಾಹ್ನ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಗ್ರಾಮದ ಇಬ್ಬರು ಕಾಮುಕರು ದ್ವಿಚಕ್ರವಾಹನದಲ್ಲಿ ಬಂದು ಆಕೆಯನ್ನು ಅಪಹರಿಸಿದ್ದಾರೆ. ರಾತ್ರಿಯಾದರೂ ಯುವತಿ ಮನೆಗೆ ಬರದಿರುವ ಹಿನ್ನೆಲೆಯಲ್ಲಿ, ನಾಪತ್ತೆಯಾಗಿರುವ ಬಗ್ಗೆ ಮನೆಯವರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಪೊಲೀಸ್​ ಅಧಿಕಾರಿ ರವಿಕುಮಾರ್ ಕೂಡ ಗ್ರಾಮಕ್ಕೆ ಭೇಟಿ ನೀಡಿ ಈ ಬಗ್ಗೆ ಪರಿಶೀಲನೆ ನಡೆಸಿದ್ದರು. ಆದರೆ ಮರುದಿನ ಬೆಳಗ್ಗೆ ಆಕೆಯನ್ನು ಗ್ರಾಮದ ಹೊರವಲಯದಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಕೆಯ ಹೇಳಿಕೆ ಸಹ ಪಡೆದುಕೊಳ್ಳಲಾಗಿದೆ.‌ ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. 

ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ಖಚಿತಗೊಂಡಿದೆ. ಇನ್ನು ಆರೋಪಿಗಳನ್ನು ಶೀಘ್ರ ಬಂಧಿಸಲಾಗುತ್ತದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.