-->

ಕೇರಳ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ದೂರು ನೀಡಲು ಬಂದಾಕೆಯನ್ನು ಅವಮಾನಿಸಿದ ಠಾಣಾಧಿಕಾರಿ  ಕರ್ತವ್ಯದಿಂದ ವಜಾ

ಕೇರಳ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ದೂರು ನೀಡಲು ಬಂದಾಕೆಯನ್ನು ಅವಮಾನಿಸಿದ ಠಾಣಾಧಿಕಾರಿ ಕರ್ತವ್ಯದಿಂದ ವಜಾ

ಕೊಚ್ಚಿ: ಕೇರಳ ರಾಜ್ಯದ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಿಯ ಅಲುವಾ ಪೊಲೀಸ್​ ಠಾಣೆಯ ಸರ್ಕಲ್​ ಇನ್ಸ್​ಪೆಕ್ಟರ್​ ಸುಧೀರ್​ನನ್ನು ಠಾಣಾಧಿಕಾರಿ ಕರ್ತವ್ಯದಿಂದ ವಜಾಗೊಳಿಸಲಾಗಿದೆ. 

ದೂರು ನೀಡಲು ಬಂದಿರುವ ಸಂತ್ರಸ್ತೆಯ ದೂರನ್ನು ಆಲಿಸದೆ ಸರ್ಕಲ್ ಇನ್ ಸ್ಪೆಕ್ಟರ್  ಅವಮಾನಿಸಿದ್ದನೆಂದು ಆರೋಪಿಸಿ ಮನನೊಂದು ಕಾನೂನು ವಿದ್ಯಾರ್ಥಿನಿ ಮೌಫಿಯಾ ಪರ್ವೀನ್​ (23) ಆತ್ಮಹತ್ಯೆ ಮಾಡಿಕೊಂಡಿದ್ದರು. ಈ  ಹಿನ್ನೆಲೆಯಲ್ಲಿ ಆತನನ್ನು ವಜಾಗೊಳಿಸಿ ಕ್ರಮ ಜರುಗಿಸಲಾಗಿದೆ. 

ಸುಧೀರ್​ ಈ ರೀತಿ ನಡೆದುಕೊಂಡಿರುವುದು ಇದು ಮೊದಲೇನಲ್ಲ. ಅನೇಕ ಬಾರಿ ದೂರುದಾರ ಬಳಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಕೊಲ್ಲಂನ ಅಂಚಲ್​ ಮತ್ತು ಕಡಕ್ಕಲ್​ ಪೊಲೀಸ್​ ಠಾಣೆಯಲ್ಲಿದ್ದ ವೇಳೆ ಅನುಚಿತವಾಗಿ ವರ್ತನೆ ಸೇರಿದಂತೆ ಅನೇಕ ಆರೋಪಗಳು ಕೇಳಿ ಬಂದಿತ್ತು. 

ಇನ್ನು ಕೇರಳ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಉತ್ತರಾ ಕೊಲೆ ಪ್ರಕರಣದಲ್ಲೂ ಸುಧೀರ್​ ಹೆಸರು ಕೇಳಿಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಧೀರ್​ ನೀಡಿದ್ದ ವರದಿಯಲ್ಲಿ ಗಂಭೀರ ಲೋಪಗಳಿರುವುದು ಕಂಡುಬಂದಿತ್ತು. ಅಲ್ಲದೆ, ಸಾಕ್ಷ್ಯ ಸಂಗ್ರಹದಲ್ಲೂ ಆತ ಲೋಪ ಎಸಗಿದ್ದು, ಕೊಲೆಯ ಮಹತ್ವದ ಸಾಕ್ಷಿಗಳ ಸಂಗ್ರಹವನ್ನು ಸುಧೀರ್​ ಮಾಡಿರಲೇ ಇಲ್ಲ. ಆ ಬಳಿಕ ಇದೇ ಪ್ರಕರಣದಲ್ಲಿ ಅಪರಾಧ ದಳ ತನಿಖೆ ನಡೆಸಿದ ಬಳಿಕ ಸುಧೀರ್​ ಅಸಡ್ಡೆ ತೋರಿದ ಸಾಕ್ಷಿಗಳೇ ಪ್ರಕರಣಕ್ಕೆ ಪ್ರಮುಖ ತಿರುವು ನೀಡಿತ್ತು. ಆ ಬಳಿಕ, ಉತ್ತರಾ ಸಾವಿಗೆ ನ್ಯಾಯವೂ ದೊರಕಿತ್ತು.

ಹಿಂದೆ ಕೊಲ್ಲಂನಲ್ಲಿ ವಲಸೆ ಕಾರ್ಮಿಕರು ದೂರು ನೀಡಲು ಠಾಣೆಗೆ ಬಂದಾಗ ಅವರನ್ನು ಸುಧೀರ್​ ಅಗೌರವದಿಂದ ನಡೆಸಿಕೊಂಡಿದ್ದರು. ದೂರು ನೀಡಲು ಬಂದಿರುವ ವಲಸೆ ಕಾರ್ಮಿಕರಿಂದಲೇ ಠಾಣೆಯನ್ನು ಸ್ವಚ್ಛಗೊಳಿಸುವ ಮೂಲಕ ವಿಕೃತಿ ಮೆರೆದಿದ್ದರು. ಆಗಲೂ ಸುಧೀರ್​ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೂ ತನ್ನ ಚಾಳಿಯನ್ನು ಸುಧೀರ್​ ಬಿಟ್ಟಿರಲೇ ಇಲ್ಕ. 

ನ.22ರಂದು ಕಾನೂನು ವಿದ್ಯಾರ್ಥಿನಿ ಮೌಫಿಯಾ ಪರ್ವೀನ್​ (23) ಎಂಬ ಕಾನೂನು ವಿದ್ಯಾರ್ಥಿನಿ ತನ್ನ ಪತಿಯ ಕಿರುಕುಳ ಸಹಿಸಲಾಗದೆ ಆತನ ವಿರುದ್ಧ ದೂರು ನೀಡಲು ಬಂದಿದ್ದರು. ಆಗಲೂ ಸುಧೀರ್​ ಇದೇ ರೀತಿ ಅಸಭ್ಯವಾಗಿ ವರ್ತಿಸಿದ್ದಾನೆ. ದೂರು ನೀಡಲು ಸ್ಟೇಷನ್ ಗೆ ಹೋಗಿ ಮನೆಗೆ ಬಂದ ಬೆನ್ನಲ್ಲೇ ಮೌಫಿಯಾ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಡೆತ್ ನೋಟ್ ನಲ್ಲಿ ಅವರು, "ತನಗೆ ಪೊಲೀಸರಿಂದ ಯಾವುದೇ ನ್ಯಾಯ ದೊರಕಲಿಲ್ಲ. ಬದಲಾಗಿ ಪತಿಯ ಕುಟುಂಬದೊಂದಿಗೆ ಸಂಧಾನಕ್ಕಾಗಿ ನನ್ನನ್ನು ಕರೆಸಿದ್ದರು" ಎಂದು ಮೌಫಿಯಾ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. 

ಸಂಧಾನ ನಡೆಯುವ ವೇಳೆ ಮೌಫಿಯಾ ತನ್ನ ಪತಿಯ ಕಪಾಳಕ್ಕೆ ಬಾರಿಸಿದ್ದಳು. ಆಗ ಕೋಪಗೊಂಡ ಪೊಲೀಸರು ಠಾಣೆಯ ಒಳಗೆ ಇಂತಹ ಕೆಲಸ ಮಾಡಿದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮೌಫಿಯಾಗೆ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿದೆ. ಅಲ್ಲದೆ, ಸುಧೀರ್​ ಆಕೆಯನ್ನು ಅವಮಾನಿಸಿದ್ದರು ಎಂದು ತಿಳಿದುಬಂದಿದೆ. ಇದರಿಂದ ಮನನೊಂದಿದ್ದ ಮೌಫಿಯಾ, ತಮಗೆ ನ್ಯಾಯ ದೊರಕಲಿಲ್ಲ ಎಂಬ ನಿರಾಶೆಯಿಂದ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ. ಮೌಫಿಯಾ ತೋಡುಪುಳ್ಳಾದ ಖಾಸಗಿ ಕಾಲೇಜೊಂದರಲ್ಲಿ ಕಾನೂನು ಓದುತ್ತಿದ್ದರು.

Ads on article

Advertise in articles 1

advertising articles 2

Advertise under the article