ಪಾಸ್ ಪೋರ್ಟ್ ಕವರ್ ಆರ್ಡರ್ ಮಾಡಿದ ವ್ಯಕ್ತಿಗೆ ಕವರ್ ನೊಂದಿಗೆ ಒರಿಜಿನಲ್ ಪಾಸ್‌ಪೋರ್ಟ್ ಡೆಲಿವರಿ ಮಾಡಿದ ಅಮೆಝಾನ್

                        ಸಾಂದರ್ಭಿಕ ಚಿತ್ರ

ತಿರುವನಂತಪುರ: ಇತ್ತೀಚೆಗೆ ಪ್ರತಿಷ್ಠಿತ ಆನ್ಲೈನ್ ಡೆಲಿವರಿ ಸಂಸ್ಥೆ ಅಮೆಝಾನ್ ನಲ್ಲಿ ಐಫೋನ್ ಆರ್ಡರ್ ಮಾಡಿದ್ದ ಕೇರಳದ ವ್ಯಕ್ತಿಗೆ ಪಾತ್ರೆ ತೊಳೆಯುವ ಸೋಪ್ ಹಾಗೂ 5 ರೂ. ನಾಣ್ಯ ಪಾರ್ಸೆಲ್ ಬಂದಿದ್ದ ಘಟನೆ ನೆನಪಿನಿಂದ ಮರೆಯಾಗುವ ಮೊದಲೇ ಪಾಸ್‌ಪೋರ್ಟ್ ಕವರ್ ಆರ್ಡರ್ ಮಾಡಿರುವಾತನಿಗೆ ಒರಿಜಿನಲ್ ಪಾಸ್ ಪೋರ್ಟೇ ಬಂದಿರುವ ಘಟನೆ ವಯನಾಡ್ ಜಿಲ್ಲೆಯ ಕನಿಯಂಬೆಟ್ಟ ಎಂಬಲ್ಲಿ ನಡೆದುದೆ.

ವಯನಾಡ್ ಜಿಲ್ಲೆಯ ಕನಿಯಂಬೆಟ್ಟ ನಿವಾಸಿ ಮಿಥುನ್ ಬಾಬು ಅವರು ಅಮೇಝಾನ್ ನಲ್ಲಿ ಪಾಸ್‌ಪೋರ್ಟ್ ಕವರ್ ಅನ್ನು ಆರ್ಡರ್ ಮಾಡಿದ್ದರು. ಆದರೆ ಅಚ್ಚರಿ ಎಂದರೆ ಅಮೇಝಾನ್ ಪಾಸ್ ಪೋರ್ಟ್ ಕವರ್ ಜೊತೆಗೆ ಒಂದು ಒರಿಜಿನಲ್ ಪಾಸ್‌ಪೋರ್ಟ್ ಅನ್ನು ಕೂಡಾ ಡೆಲಿವರಿ ಮಾಡಿದೆ. 

ನವೆಂಬರ್ 1ರಂದು ಮಿಥುನ್ ಬಾಬು ಅವರಿಗೆ ಪಾಸ್‌ಪೋರ್ಟ್ ಕವರ್ ಜತೆಗೆ ಬೇರೆ ಯಾರದ್ದೋ ಒರಿಜಿನಲ್ ಪಾಸ್‌ಪೋರ್ಟ್ ಡೆಲಿವರಿಯಾಗಿದೆ. ಈ ಬಗ್ಗೆ ತಕ್ಷಣ ಅವರು ಅಮೆಝಾನ್ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದ್ದಾರೆ‌‌. 'ಇಂತಹ ತಪ್ಪು ಮುಂದೆ ನಡೆಯದಂತೆ ಮಾರಾಟಗಾರರಿಗೆ ತಿಳಿಸುತ್ತೇವೆ' ಎಂದು ಅತ್ತ ಕಡೆಯಿಂದ ಉತ್ತರ ದೊರಕಿದೆಯೇ ಹೊರತು, ಒರಿಜಿನಲ್ ಪಾಸ್‌ಪೋರ್ಟ್ ಅನ್ನು ವಾರಸುದಾರರಿಗೆ ತಲುಪಿಸುವುದು ಹೇಗೆ ಎಂಬ ಯಾವುದೇ ಉತ್ತರ ದೊರಕಿರಲಿಲ್ಲ ಎಂದು ತಿಳಿದು ಬಂದಿದೆ. 

ಪಾಸ್‌ಪೋರ್ಟ್ ನಲ್ಲಿರುವ ವಿವರದ ಪ್ರಕಾರ ಅದು ತ್ರಿಶ್ಶೂರಿನ ಮುಹಮ್ಮದ್ ಸಲೀಹ್ ಎಂಬವರಿಗೆ  ಸೇರಿದ್ದಾಗಿತ್ತು. ಅದರಲ್ಲಿ ಅವರ ದೂರವಾಣಿ ಸಂಖ್ಯೆ ಇಲ್ಲದಿರುವುದರಿಂದ ಅವರನ್ನು ಸಂಪರ್ಕಿಸುವುದು ಅಸಾಧ್ಯವಾಗಿತ್ತು. ಆದರೆ ಮಿಥುನ್ ಅವರು ಶ್ರಮ ಪಟ್ಟು ಮಾಲಕರನ್ನು ಪತ್ತೆ ಹಚ್ಚಿದ್ದಾರೆ. 

ಮುಹಮ್ಮದ್ ಸಲೀಸ್ ಅವರು ಅಮೇಝಾನ್ ಮೂಲಕ ಮೊದಲು ಪಾಸ್‌ಪೋರ್ಟ್ ಕವರ್ ಅನ್ನು ಆರ್ಡರ್ ಮಾಡಿರಬಹುದು. ಆದರೆ ತಮಗೆ ದೊರೆತ ಕವರಿನೊಳಗೆ ಪಾಸ್‌ಪೋರ್ಟ್ ಇರಿಸಿದಾಗ ಅದು ಸರಿಯಾಗಿಲ್ಲದೆ ಇರುವುದರಿಂದ ವಾಪಸ್ ಮಾಡಲು ಅವರು ನಿರ್ಧರಿಸಿದ್ದಾರೆ. ಆದರೆ ಅವರು ಕವರ್ ವಾಪಸ್ ಮಾಡುವಾಗ ಪಾಸ್‌ಪೋರ್ಟ್ ತೆಗೆಯದೆಯೇ ನೀಡಿದ್ದಿರಬಹುದು. ಮಿಥುನ್ ಬಾಬು ಅವರು ಪಾಸ್ ಪೋರ್ಟ್ ಕವರ್ ಆರ್ಡರ್ ಮಾಡಿದಾಗ ಮಾರಾಟಗಾರರು ಸರಿಯಾಗಿ ಪರಿಶೀಲನೆ ನಡೆಸದೆ ಅದೇ ಕವರನ್ನು ಅವರಿಗೆ ಕಳುಹಿಸಿರಬೇಕೆಂದು ಊಹಿಸಲಾಗಿದೆ. ಇದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಎನ್ನಲಾಗಿದೆ.