ಪ್ಯಾರಾಸೇಲಿಂಗ್‌ ಮಾಡುತ್ತಿದ್ದಾಗ ಹಗ್ಗ ತುಂಡಾಗಿ ಅತೀ ಎತ್ತರದಿಂದ ಸಮುದ್ರಕ್ಕೆ ಬಿದ್ದ ದಂಪತಿ: ಭಯಾನಕ ದೃಶ್ಯದ ವೀಡಿಯೋ ವೈರಲ್

ದಿಯು: ಪ್ಯಾರಾಸೇಲಿಂಗ್ ಮಾಡುತ್ತಿದ್ದ ವೇಳೆ ಪ್ಯಾರಾಚೂಟ್‌ನ ಹಗ್ಗ ತುಂಡಾದ ಪರಿಣಾಮ ದಂಪತಿ ಸಮುದ್ರಕ್ಕೆ ಬಿದ್ದ ಭಯಾನಕ ಘಟನೆ ದಿಯುವಿನಲ್ಲಿ ನಡೆದಿದೆ. ಪವರ್‌ ಬೋಟ್‌ಗೆ ಕಟ್ಟಿರುವ ಹಗ್ಗ ತುಂಡಾಗಿರುವುದರಿಂದ ಈ ಘಟನೆ ಸಂಭವಿಸಿದೆ. ಈ ಭಯಾನಕ ದೃಶ್ಯದ ವೀಡಿಯೋ ಇದೀಗ ವೈರಲ್‌ ಆಗಿದೆ. 


ಗುಜರಾತ್‌ ಮೂಲದ ಅಜಿತ್ ಕಥಾಡ್ ಮತ್ತು ಸರಳಾ ಕಥಾಡ್ ದಂಪತಿ ದಿಯುವಿನಲ್ಲಿ ಪ್ಯಾರಾಸೇಲಿಂಗ್ ಮಾಡುತ್ತಿದ್ದರು. ಪ್ಯಾರಚೂಟ್ ನಲ್ಲಿ ಅವರು ಭಾರೀ ಎತ್ತರದಲ್ಲಿ ಹಾರುತ್ತಿದ್ದ ವೇಳೆಯೇ ಪವರ್‌ ಬೋಟ್‌ಗೆ ಕಟ್ಟಲಾಗಿದ್ದ ಹಗ್ಗ ತುಂಡಾಗಿದೆ.  ಪರಿಣಾಮ ದಂಪತಿ ಸಮುದ್ರಕ್ಕೆ ಬಿದ್ದಿದ್ದಾರೆ. ಹಗ್ಗ ತುಂಡಾದ ಕೂಡಲೇ ದಂಪತಿ ಚೀರಿಕೊಂಡಿದ್ದಾರೆ.

ಆ ತಕ್ಷಣ ನಾಗೋವಾ ಬೀಚ್‌ನಲ್ಲಿ ಪ್ಯಾರಾಸೇಲಿಂಗ್ ಸೇವೆ ನಡೆಸುತ್ತಿದ್ದ ಖಾಸಗಿ ಸಂಸ್ಥೆ ಪಾಮ್ಸ್ ಅಡ್ವೆಂಚರ್ ಮತ್ತು ಮೋಟಾರ್‌ ಸ್ಪೋರ್ಟ್ಸ್‌ನ ಬೀಚ್‌ನಲ್ಲಿದ್ದ ಜೀವರಕ್ಷಕ ಸಿಬ್ಬಂದಿ ದಂಪತಿಯನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್‌ ದಂಪತಿ ಲೈಫ್‌ ಜಾಕೆಟ್‌ ಧರಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ. 

ಈ ಭಯಾನಕ ಘಟನೆಯನ್ನು ವಿವರಿಸಿರುವ ಅಜಿತ್ ಕಥಾಡ್ ಸಹೋದರ ರಾಕೇಶ್‌ ಕಥಾಡ್, ‘ನನ್ನ ಅಣ್ಣ ಹಾಗೂ ಅತ್ತಿಗೆ ಬಹಳ ಸಂತೋಷದಿಂದ ಪ್ಯಾರಾಸೇಲಿಂಗ್ ಮಾಡುತ್ತಿದ್ದರು. ನಾನು ಕೆಳಗಿನಿಂದ ನೋಡುತ್ತಿದ್ದೆ. ಆದರೆ ಏಕಾಏಕಿ ಹಗ್ಗ ತುಂಡಾಗಿದೆ. ಆ ತಕ್ಷಣ ನನಗೆ ಏನು ಮಾಡಬೇಕೆಂದು ದಿಕ್ಕೇ ತೋಚಲಿಲ್ಲ. ಕೂಡಲೇ ಅವರು ಅತಿ ಎತ್ತರದಿಂದ ಸಮದ್ರಕ್ಕೆ ಬಿದ್ದಿದ್ದಾರೆ. ಆಗ ನನ್ನ ಉಸಿರೇ ನಿಂತು ಹೋಗಿದೆ. ಆದರೆ ನಾನು ಅಸಹಾಯಕನಾಗಿದ್ದೆ’ ಎಂದಿದ್ದಾರೆ.