-->
ಪಟಾಕಿ ತರಲೆಂದು ಹೋಗಿದ್ದ ಬಾಲಕನ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟು ಕೊಲೆ: ಐವರು ಅಂದರ್

ಪಟಾಕಿ ತರಲೆಂದು ಹೋಗಿದ್ದ ಬಾಲಕನ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟು ಕೊಲೆ: ಐವರು ಅಂದರ್

ಮೈಸೂರು: ಪಟಾಕಿ ತರಲು ಹೋಗಿದ್ದ ಬಾಲಕನೋರ್ವನನ್ನು ಅಪಹರಿಸಿರುವ ದುಷ್ಕರ್ಮಿಗಳ ತಂಡವೊಂದು ಹಣಕ್ಕೆ ಬೇಡಿಕೆಯಿಟ್ಟಿದ್ದಲ್ಲದೆ ಬಾಲಕನನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣವು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಹನಗೋಡು ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ತರಕಾರಿ ವ್ಯಾಪಾರಿ ನಾಗರಾಜ್ ಅವರ ಪುತ್ರ ಕಾರ್ತಿಕ್ (9) ಹತ್ಯೆಯಾದ ಬಾಲಕ.

 ಮೃತ ಬಾಲಕ‌ ಕಾರ್ತಿಕ್ ನ.3ರಂದು ಪಟಾಕಿ ತರಲೆಂದು ಅಂಗಡಿಗೆ ಹೋಗುತ್ತಿದ್ದ. ಈ ಸಂದರ್ಭ ದುಷ್ಕರ್ಮಿಗಳು ಆತನನ್ನು ಅಪಹರಿಸಿದ್ದಾರೆ. ಕಾರ್ತಿಕ್ ಮತ್ತೆ ಮನೆಗೆ ವಾಪಸ್ ಬರದಿರುವುದರಿಂದ ಗಾಬರಿಯಾಗಿರುವ ಪೋಷಕರು ಆತನನ್ನು ಹುಡುಕಲು ಪ್ರಾರಂಭಿಸಿದ್ದಾರೆ. 

ಈ ವೇಳೆ ಬಾಲಕನ ತಂದೆಗೆ ದೂರವಾಣಿ ಕರೆಯೊಂದು ಬಂದಿದ್ದು, 4 ಲಕ್ಷ ರೂ. ಬೇಡಿಕೆ ಇಟ್ಟು, ಕಾರ್ತಿಕ್ ನನ್ನು ಬಿಡುವುದಾಗಿ ದುಷ್ಕರ್ಮಿಗಳು ಹೇಳಿದ್ದಾರೆ. ಅಲ್ಲದೆ ಪೊಲೀಸರಿಗೆ ದೂರು ನೀಡಿದಲ್ಲಿ ತಮ್ಮ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದರಿಂದ ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಪಿ ಚೇತನ್ ಸೂಚನೆ ಮೇರೆಗೆ ಎಸ್ಪಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರವಿಪ್ರಸಾದ ನೇತೃತ್ವದಲ್ಲಿ ಕಾರ್ಯ ಪ್ರವೃತ್ತರಾದ ಪೊಲೀಸರು ಅಪಹರಣಕಾರರ ದೂರವಾಣಿ ಕರೆಯನ್ನು ಟ್ರ್ಯಾಪ್ ಮಾಡಿ ಆರೋಪಿಗಳಲ್ಲೋರ್ವನನ್ನು ಬಂಧಿಸಿದ್ದಾರೆ.  

ಆತ ಬಾಲಕನನ್ನು ಹತ್ಯೆ ಮಾಡಿ ಕುಂಟೇರಿ ಕೆರೆಯ ಬಯಲಿನ ಹಳ್ಳದಲ್ಲಿ ಮೃತದೇಹವನ್ನು ಬಿಸಾಡಿರುವುದಾಗಿ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.‌ಈ ಆಧಾರದ ಮೇಲೆ ಉಳಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಹುಣಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Ads on article

Advertise in articles 1

advertising articles 2

Advertise under the article