ಭಟ್ಕಳ: ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಪೋಷಕರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಿತ್ರಾಪುರ ಹೊಸಗದ್ದೆ ನಿವಾಸಿ ಮಮತಾ ಜಗದೀಶ ನಾಯ್ಕ (23) ನಾಪತ್ತೆಯಾದ ಯುವತಿ.
ನಾಪತ್ತೆಯಾದ ಮಮತಾ ಜಗದೀಶ ನಾಯ್ಕರಿಗೆ ಕಳೆದ ಕೆಲವು ಸಮಯಗಳ ಹಿಂದೆ ಫೇಸ್‌ಬುಕ್‌ನಲ್ಲಿ ಗೋಕಾಕ ತಾಲೂಕಿನ ಪೊಲೀಸ್ ಪೇದೆ ಪ್ರಕಾಶ ಅಣ್ಣಪ್ಪ ಗಾಡಿವಡ್ಡರ್ ಎಂಬಾತನ ಪರಿಚಯವಾಗಿದೆ. ಕಳೆದ ಅ.25ರಂದು ಆತ ಭಟ್ಕಳಕ್ಕೆ ಬಂದು ಈಕೆಯ ವಿಚಾರವಾಗಿ ಮನೆಯಲ್ಲಿ ಗಲಾಟೆ ಮಾಡಿಕೊಂಡು ಹೋಗಿದ್ದ ಎನ್ನಲಾಗಿದೆ. ಬಳಿಕ ಆಕೆಯ ತಂಟೆಗೆ ಬರುವುದಿಲ್ಲ ಎಂದು ಆಕೆಯ ಪೋಷಕರಿಗೆ ಭರವಸೆ ಕೊಟ್ಟು ಹೋಗಿದ್ದ.
ಆದರೆ ನ.11ಕ್ಕೆ ಬೆಳಗ್ಗೆ ಬಂದು ಆಕೆಯೊಂದಿಗೆ ಮಾತನಾಡಿಕೊಂಡು ಹೋಗಿದ್ದಾನೆ. ಅದಾಗಿ ಕೇವಲ ಅರ್ಧ ಗಂಟೆಯೊಳಗೆ ಮಮತಾ ಜಗದೀಶ್ ನಾಯ್ಕ್ ಮನೆಯಿಂದ ನಾಪತ್ತೆಯಾಗಿದ್ದಾರೆಂದು ಅವರ ಸಹೋದರ ರಮೇಶ ನಾರಾಯಣ ನಾಯ್ಕ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.