Mangaluru: ಟೈಲ್ಸ್ ಫ್ಯಾಕ್ಟರಿ ಡ್ರೈನೇಜ್ ಒಳಗಡೆ ಬಾಲಕಿಯ ಮೃತದೇಹ ಪತ್ತೆ; ಕೂಲಿ ಕಾರ್ಮಿಕರು ಕೃತ್ಯ ಎಸಗಿರುವ ಶಂಕೆ

ಮಂಗಳೂರು: ನಗರದ ಹೊರವಲಯದಲ್ಲಿರುವ ವಾಮಂಜೂರು ಬಳಿಯ ಪರಾರಿ ಎಂಬಲ್ಲಿನ ಟೈಲ್ಸ್ ಫ್ಯಾಕ್ಟರಿಯೊಂದರ ಡ್ರೈನೇಜ್ ಒಳಗಡೆ 8ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಕೊಲೆ ಶಂಕೆ ವ್ಯಕ್ತವಾಗಿರುವುದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಟೈಲ್ಸ್ ಫ್ಯಾಕ್ಟರಿಯ ಕೂಲಿ ಕಾರ್ಮಿಕರಲ್ಲಿ ಸಾಕಷ್ಟು ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಟೈಲ್ಸ್ ಫ್ಯಾಕ್ಟರಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ವಲಸೆ ಕಾರ್ಮಿಕರ ಪುತ್ರಿಯಾಗಿರುವ ಈ ಬಾಲಕಿ ಇಂದು ಸಂಜೆ 4ಗಂಟೆಯ ಸುಮಾರಿಗೆ ನಾಪತ್ತೆಯಾಗಿದ್ದಾಳೆ‌. ಪೋಷಕರು ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲೂ ಬಾಲಕಿಯ ಸುಳಿವೇ ಇರಲಿಲ್ಲ. ಆದರೆ ಸಂಜೆ 6ಗಂಟೆಯ ಹೊತ್ತಿಗೆ ಬಾಲಕಿ ಟೈಲ್ಸ್ ಫ್ಯಾಕ್ಟರಿಯ ಡ್ರೈನೇಜ್ ನಲ್ಲಿ ಪತ್ತೆಯಾಗಿದ್ದಾಳೆ.

ತಕ್ಷಣ ಬಾಲಕಿಯನ್ನು ಮೇಲಕ್ಕೆತ್ತಿ ನೋಡಿದಾಗ ಅದಾಗಲೇ ಆಕೆ ಮೃತಪಟ್ಟಿದ್ದು ತಿಳಿದು ಬಂದಿದೆ. ತಕ್ಷಣ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿಯ ಪೋಷಕರು ಟೈಲ್ಸ್ ಫ್ಯಾಕ್ಟರಿಯಲ್ಲಿ ದುಡಿಯುತ್ತಿರುವ  ಕೂಲಿ ಕಾರ್ಮಿಕರೇ ಈ ಕೃತ್ಯ ಎಸಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ‌.

ಈ ಟೈಲ್ಸ್ ಫ್ಯಾಕ್ಟರಿಯಲ್ಲಿ 30 ಮಂದಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇವರಲ್ಲಿ ಕರ್ನಾಟಕದ 10ಮಂದಿ ರವಿವಾರ ವಾದ್ದರಿಂದ ಯಾರೂ ಕೆಲಸಕ್ಕೆ ಬಂದಿಲ್ಲ. ಆದ್ದರಿಂದ ಕೃತ್ಯ ನಡೆದಿರುವ ಸಂದರ್ಭ  ಒಳಗಡೆಯಿದ್ದ 19 ಮಂದಿಯಲ್ಲಿ ಸಾಕಷ್ಟು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಶೀಘ್ರ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.