-->

ಸಂತ್ರಸ್ತೆಯ ಒಪ್ಪಿತ ಲೈಂಗಿಕ ಕ್ರಿಯೆ ಪ್ರಕರಣದ ಆರೋಪಿಗೆ ಜಾಮೀನು ನೀಡಿದ ಹೈಕೋರ್ಟ್

ಸಂತ್ರಸ್ತೆಯ ಒಪ್ಪಿತ ಲೈಂಗಿಕ ಕ್ರಿಯೆ ಪ್ರಕರಣದ ಆರೋಪಿಗೆ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರು: ಸಂತ್ರಸ್ತ ಮಹಿಳೆಯ ಒಪ್ಪಿಗೆಯಿಂದಲೇ ನಡೆದಿರುವ ಲೈಂಗಿಕಕ್ರಿಯೆ ಹಾಗೂ ವೀಡಿಯೋ ಕಾಲ್‌ನಲ್ಲಿ ದೇಹದ ಖಾಸಗಿ ಅಂಗವನ್ನು ತೋರಿಸಿರುವ ಅಂಶವನ್ನು ಪರಿಗಣಿಸಿರುವ ಹೈಕೋರ್ಟ್, ಅತ್ಯಾಚಾರ ಹಾಗೂ ಅಶ್ಲೀಲ ಫೋಟೋ ರವಾನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ರಾಜ್ಯ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯೇ ವೀಡಿಯೋ ಕಾಲ್ ಮಾಡಿರುವ ಸಂದರ್ಭ ಪ್ರಿಯಕರನಿಗೆ ತನ್ನ ಖಾಸಗಿ ಅಂಗವನ್ನು ತೋರಿಸಿದ್ದಳು. ಈ ಸಂದರ್ಭ ಆದ ಅದರ ಸ್ಕ್ರೀನ್‌ಶಾಟ್ ತೆಗೆದು ಆಕೆಯ ಪತಿಗೇ ಕಳುಹಿಸಿದ್ದನು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಕೊಪ್ಪಳ ನಿವಾಸಿ ಬಸನಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್ ಅವರಿದ್ದ ಪೀಠ, ಆರೋಪಿಗೆ ಷರತ್ತುಬದ್ಧ ಜಾಮೀನು ವಿಧಿಸಿ ಆದೇಶಿಸಿದೆ.

ಒಪ್ಪಿತ ಲೈಂಗಿಕ ಕ್ರಿಯೆ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ವಿವಾಹಕ್ಕೆ ಮುನ್ನ ಹಾಗೂ ಆ ಬಳಿಕವೂ ಆರೋಪಿ ಪ್ರಿಯಕರನೊಂದಿಗೆ ಸಂಬಂಧ ಹೊಂದಿದ್ದಳು. ಇವರಿಬ್ಬರ ನಡುವೆ ಹಲವು ಬಾರಿ ಲೈಂಗಿಕಕ್ರಿಯೆಯೂ ನಡೆದಿತ್ತು. ಸಂತ್ರಸ್ತೆ ಎಂದು ದೂರು ನೀಡಿರುವ ಮಹಿಳೆ ನಿರಂತರವಾಗಿ ಮುಂಜಾವಿನ ವೇಳೆ 4 ರಿಂದ 5 ಗಂಟೆಯ ನಡುವೆ ಪತಿಯ ಮೊಬೈಲ್ ಫೋನ್‌ನಿಂದಲೇ ಆರೋಪಿ ಪ್ರಿಯಕರನಿಗೆ ವೀಡಿಯೋ ಕರೆ ಮಾಡುತ್ತಿದ್ದಳು.

ಈ ಸಂದರ್ಭ ಆಕೆಯೇ ತನ್ನ ಗುಪ್ತಾಂಗವನ್ನು ತೋರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದನ್ನು ಗಮನಿಸಿದರೆ ಸಂತ್ರಸ್ತೆಗೆ ಆರೋಪಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಹಾಗೂ ದೇಹದ ಖಾಸಗಿ ಭಾಗವನ್ನು ತೋರಿಸಲು ಸಮ್ಮತ ಇತ್ತು ಎಂಬುದನ್ನು ಸೂಚಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಇದು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಪ್ರಕರಣವಲ್ಲ ಹಾಗೂ ಆತನಿಗೆ ಕ್ರಿಮಿನಲ್ ಹಿನ್ನೆಲೆಯೂ ಇಲ್ಲ. ಇಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ಚಿತ್ರ ರವಾನಿಸಿರುವ ಆರೋಪ ಸಂಬಂಧ ಐಟಿ ಕಾಯ್ದೆ ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಬಹುದಾಗಿದೆ ಎಂದು ಹೇಳಿದೆ. ಆದರೆ ಜಾಮೀನು ನೀಡಿದಲ್ಲಿ ಮಹಿಳೆಗೆ ಜೀವಕ್ಕೆ ಅಪಾಯವಿದೆ ಎಂಬ ಬಗ್ಗೆ ಆಕ್ಷೇಪವಿದೆ. ಆದರೆ ಲೈಂಗಿಕ ಕ್ರಿಯೆ ನಡೆಸಲು ಹಾಗೂ ಖಾಸಗಿ ಅಂಗವನ್ನು ತೋರುವುದಕ್ಕೆ ಸಂತ್ರಸ್ತೆಯೇ ಒಪ್ಪಿಗೆ ನೀಡಿರುವ ಸಂದರ್ಭದಲ್ಲಿ ನಿಜವಾಗಿಯೂ ಆರೋಪಿಯಿಂದ ಆಕೆಯ ಜೀವಕ್ಕೆ ಅಪಾಯವಿದೆಯೇ ಅಥವಾ ಇಲ್ಲವೇ ಎಂಬ ಅಂಶ ವಿಚಾರಣಾ ನ್ಯಾಯಾಲಯದಲ್ಲಿಯೇ ನಿರ್ಣಯವಾಗಬೇಕಿದೆ. ಆದ್ದರಿಂದ ಆರೋಪಿಗೆ ಕಠಿಣ ಷರತ್ತು ವಿಧಿಸಿ ಜಾಮೀನು ನೀಡಬಹುದು ಎಂದು ತೀರ್ಮಾನಿಸಿ, ಹೈಕೋರ್ಟ್ ಜಾಮೀನು ನೀಡಿದೆ.

ಆದರೆ ಆರೋಪಿಯು 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು. ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು. ಸಾಕ್ಷ್ಯಗಳನ್ನು ತಿರುಚುವುದಕ್ಕೆ ಯತ್ನಿಸಬಾರದು. ಪ್ರಕರಣ ಇತ್ಯರ್ಥವಾಗುವರೆಗೂ ಬಾಗಲಕೋಟೆಯ ಗುಳೇಗುಡ್ಡಕ್ಕೆ ಭೇಟಿ ನೀಡಬಾರದು ಎಂದು ಷರತ್ತು ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಒಂದೇ ಗ್ರಾಮದ ನಿವಾಸಿಗಳಾದ ಹಾಗೂ ಸಂಬಂಧಿಕರಾದ ಬಸನಗೌಡ ಹಾಗೂ ಸಂತ್ರಸ್ತೆ ಎಂದು ದೂರಿರುವ ಮಹಿಳೆಯು ಪರಸ್ಪರ ಪ್ರೀತಿಸುತ್ತಿದ್ದರು. ಆಕೆಯನ್ನು ಮದುವೆಯಾಗುವುದಾಗಿ ತಿಳಿಸಿದ್ದ ಆರೋಪಿಯು, 2018ರ ಡಿ.3ರಂದು ಹಾಗೂ ಆ ನಂತರದ ದಿನಗಳಲ್ಲಿಯೂ ಹಲವು ಬಾರಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದ.

ಆದರೆ ಆ ಬಳಿಕ ಸಂತ್ರಸ್ತೆಗೆ ಬೇರೊಬ್ಬರೊಂದಿಗೆ ವಿವಾಹ ನಡೆದಿತ್ತು. ಆದರೆ ಆ ಬಳಿಕವೂ ಬಸನಗೌಡ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಅಲ್ಲದೆ ನಿರಂತರವಾಗಿ ಮುಂಜಾನೆ 4-5 ಗಂಟೆ ನಡುವೆ ವೀಡಿಯೋ ಕರೆ ಮಾಡಿ, ಖಾಸಗಿ ಅಂಗ ತೋರಿಸುವಂತೆ ಕೇಳುತ್ತಿದ್ದ. ಅದಕ್ಕೆ ಒಪ್ಪಿದ್ದ ಸಂತ್ರಸ್ತೆ ತನ್ನ ದೇಹದ ಖಾಸಗಿ ಭಾಗಗಳನ್ನು ತೋರಿಸುತ್ತಿದ್ದಳು. ಅದನ್ನು ಆತ ಸ್ಕ್ರೀನ್‌ಶಾಟ್ ಮಾಡಿಕೊಂಡಿದ್ದ. ಇದಾದ ಬಳಿಕ ಸುಮಾರು 15 ದಿನಗಳ ಕಾಲ ಸಂತ್ರಸ್ತೆ ಆತನಿಗೆ ಕರೆ ಮಾಡಿರಲಿಲ್ಲ. ಆದ್ದರಿಂದ ಆರೋಪಿ‌ ಆಕೆಯ ಗುಪ್ತಾಂಗ ತೋರಿಸುವ ಸ್ಕ್ರೀನ್‌ಶಾಟ್‌ಗಳನ್ನು ಪತಿಯ ಮೊಬೈಲ್‌ಗೆ 2021ರ ಎ.5ರಂದು ಕಳುಹಿಸಿದ್ದ. 

ಇದರಿಂದ ಪತಿ ಪತ್ನಿಯರ ಜಗಳ ನಡೆದು, ಪತ್ನಿಯನ್ನು ಪತಿ ತವರು ಮನೆಗೆ ಕಳುಹಿಸಿದ್ದ. ಅದರ ಮರು ದಿನವೇ ಸಂತ್ರಸ್ತೆ ಯಲಬುರ್ಗಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ ಜೀವ ಬೆದರಿಕೆ, ಅತ್ಯಾಚಾರ, ಅವಮಾನ ಮಾಡಿದ, ಮಹಿಳೆಯ ಖಾಸಗಿ ಭಾಗ ಸೆರೆಹಿಡಿದ, ಮನೆ ಅತಿಕ್ರಮ ಪ್ರವೇಶ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಸೆಕ್ಷನ್ 67 ಅಡಿ ಪ್ರಕರಣ ದಾಖಲಿಸಿದ್ದರು. ಹಾಗೆಯೇ 2021ರ ಎ.7ರಂದು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

Ads on article

Advertise in articles 1

advertising articles 2

Advertise under the article