-->
ಚಲಿಸುತ್ತಿದ್ದ ರೈಲಿನ ಬಾಗಿಲ ಬಳಿ ನಿಂತು ಸೆಲ್ಫಿ ತೆಗೆದಿರುವುದೇ ಮುಳುವಾಯಿತು: ವಾರದ ಬಳಿಕ ಯುವಕನ ಮೃತದೇಹ ನದಿಯಲ್ಲಿ ‌ಪತ್ತೆ

ಚಲಿಸುತ್ತಿದ್ದ ರೈಲಿನ ಬಾಗಿಲ ಬಳಿ ನಿಂತು ಸೆಲ್ಫಿ ತೆಗೆದಿರುವುದೇ ಮುಳುವಾಯಿತು: ವಾರದ ಬಳಿಕ ಯುವಕನ ಮೃತದೇಹ ನದಿಯಲ್ಲಿ ‌ಪತ್ತೆ

ಬೆಂಗಳೂರು: ಚಲಿಸುತ್ತಿದ್ದ ರೈಲಿನ ಬಾಗಿಲ ಬಳಿ ನಿಂತು ಮಧ್ಯರಾತ್ರಿ ಸೆಲ್ಫಿ ತೆಗೆಯಲು ಹೋದ ಯುವಕನೋರ್ವ ನದಿಗೆ ಬಿದ್ದು ಮೃತಪಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ಮೂಲತಃ ಮಂಡ್ಯ ಜಿಲ್ಲೆ ನಿವಾಸಿ, ಬೆಂಗಳೂರಿನ ಗಾಂಧಿ ನಗರದ ಬಾರ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್(19) ಮೃತ ದುರ್ದೈವಿ.  

ಅಭಿಷೇಕ್​ ನ.6ರಂದು ದೇವಸ್ಥಾನದಕ್ಕೆಂದು  ಪಾಂಡವಪುರಕ್ಕೆ ಸ್ನೇಹಿತರೊಂದಿಗೆ ಮೆಜೆಸ್ಟಿಕ್‌ನಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ನಡುವೆ ಅವರು ರೈಲಿನ ಬಾಗಿಲ ಬಳಿ ನಿಂತು ಸೆಲ್ಫಿ ತೆಗೆಯುತ್ತಿದ್ದ ಸಂದರ್ಭ ನಾಪತ್ತೆಯಾಗಿದ್ದರು. ಆದರೆ ಜತೆಗಿದ್ದ ಸ್ನೇಹಿತರಿಗೆ ಏನಾಗಿದೆ? ಅನ್ನೋದು ಗೊತ್ತಾಗಿರಲಿಲ್ಲ. ಅವರು ಪಾಂಡವಪುರ ರೈಲು ನಿಲ್ದಾಣದಲ್ಲಿ ಇಳಿದು ಹುಡುಕಾಟ ನಡೆಸಿದ್ದರೂ ಅಭಿಷೇಕ್​ ಸುಳಿವು ಪತ್ತೆಯಾಗಿರಲಿಲ್ಲ. 

ಬಳಿಕ ಅವರೆಲ್ಲ ವಾಪಾಸ್ ಊರಿಗೆ ಹೋಗಿದ್ದರು. ಎರಡು ದಿನವಾದರೂ ಅಭಿಷೇಕ್ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಮನೆಯವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್​ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಇನ್​ಸ್ಪೆಕ್ಟರ್ ಪುಟ್ಟಸ್ವಾಮಿ ನೇತೃತ್ವದ ತಂಡ ಪಾಂಡವಪುರಕ್ಕೆ ರೈಲಿನಲ್ಲಿ ಹೋಗಿರುವ ಬಗ್ಗೆ ಸ್ನೇಹಿತರಿಂದ ಮಾಹಿತಿ ಸಂಗ್ರಹಿಸಿ, ಮಂಡ್ಯ ಪೊಲೀಸರಿಗೆ ಹಾಗೂ ಸ್ಥಳೀಯ ಅಗ್ನಿಶಾಮಕದಳಕ್ಕೂ ಮಾಹಿತಿ ನೀಡಿದ್ದರು. ಸತತ 4-5 ದಿನಗಳಿಂದ ಹುಡುಕಾಟ ನಡೆಸಿದ್ದರೂ ಅಭಿಷೇಕ್  ಸುಳಿವು ಪತ್ತೆಯಾಗಿರಲಿಲ್ಲ.‌  

ವಿಚಾರಣೆ ವೇಳೆ ಸ್ನೇಹಿತರು, ಆತ ರೈಲಿನ ಬಾಗಿಲ ಬಳಿ ಸೆಲ್ಫಿ ತೆಗೆಯುತ್ತಿದ್ದ ಮಾಹಿತಿಯನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ರೈಲ್ವೆ ಬ್ರಿಡ್ಜ್​ನ ಕಂಬಿ ತಾಗಿ ಅಭಿಷೇಕ್ ಲೋಕಪಾವನಿ ನದಿಗೆ  ಬಿದ್ದಿರಬಹುದು ಎಂಬ ಶಂಕೆ‌ ಮೂಡಿತ್ತು. ಅದರಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಾಯದಿಂದ ಪೊಲೀಸರು ಸತತ ಮೂರು ದಿನಗಳ ಕಾಲ ಶೋಧ ನಡೆಸಿದ್ದಾರೆ. ನ.14ರಂದು ಶ್ರೀರಂಗಪಟ್ಟಣದಿಂದ 6 ಕಿ.ಮೀ. ದೂರ ನದಿಯಲ್ಲಿ ಅಭಿಷೇಕ್ ಮೃತದೇಹ ಪತ್ತೆಯಾಗಿದೆ. 

ಈ ಬಗ್ಗೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article