-->

ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ಅಪರಿಚಿತನ ಬಣ್ಣದ ಮಾತಿಗೆ ಮರುಳಾಗಿ ಮಹಿಳೆ ಕಳೆದು ಕೊಂಡಿದ್ದೇನು?

ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ಅಪರಿಚಿತನ ಬಣ್ಣದ ಮಾತಿಗೆ ಮರುಳಾಗಿ ಮಹಿಳೆ ಕಳೆದು ಕೊಂಡಿದ್ದೇನು?

ಬೆಂಗಳೂರು: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿರುವ ಅಪರಿಚಿತ ವ್ಯಕ್ತಿಯೋರ್ವನು ಗಿಫ್ಟ್ ಕಳುಹಿಸುವೆನೆಂದು ನಂಬಿಸಿ ಮಹಿಳೆಯೊಬ್ಬರಿಗೆ ಬರೋಬ್ಬರಿ 45 ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ನಡೆದಿದೆ. ಈ ಬಗ್ಗೆ ಮಹಿಳೆ ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.

ವರ್ತೂರು ನಿವಾಸಿಯಾಗಿದ್ದ ಮೋಸ ಹೋಗಿರುವ ಮಹಿಳೆಗೆ, ಸಾಮಾಜಿಕ ಜಾಲತಾಣವಾದ ‘ಇನ್‌ಸ್ಟಾಗ್ರಾಮ್‌&#39 ನಲ್ಲಿ ಅಲೆಕ್ಸ್ ಎರಿನ್ ಎಂಬ ಹೆಸರಿನ ವ್ಯಕ್ತಿ ಪರಿಚಯವಾಗಿದ್ದ. ಆತ ತನ್ನನ್ನು ಹಡಗಿನಲ್ಲಿ ಕ್ಯಾಪ್ಟನ್ ಆಗಿರುವುದಾಗಿ  ಹೇಳಿಕೊಂಡು ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾನೆ. ಇದನ್ನು ನಂಬಿರುವ ಮಹಿಳೆ, ಆತನೊಂದಿಗೆ ಗೆಳೆತನ ಮುಂದುವರಿಸಲು ಒಪ್ಪಿಕೊಂಡು ಆತನ ಫ್ರೆಂಡ್ ರಿಕ್ವೆಸ್ಟ್ ಅನ್ನು ಅಸೆಪ್ಟ್ ಮಾಡಿದ್ದಾರೆ‌. ಆ ಬಳಿಕ ಇಬ್ಬರೊಂದಿಗೆ ಚಾಟಿಂಗ್ ಆರಂಭವಾಗಿದೆ. 

ಈ ನಡುವೆ ಆರೋಪಿ ತಮ್ಮ ಸ್ನೇಹದ ನೆನಪಿಗಾಗಿ ಉಡುಗೊರೆಯೊಂದನ್ನು ಕಳುಹಿಸಿ ಕೊಡುವುದಾಗಿ ಹೇಳಿದ್ದಾನೆ. ಮಹಿಳೆಯೂ ಅದಕ್ಕೆ ಸಮ್ಮತಿಸಿದ್ದಾರೆ. ಅದರಂತೆ ಸೆ.30ರಂದು ಮಹಿಳೆಗೆ ಕರೆ ಮಾಡಿರುವ ಮತ್ತೋರ್ವ ವ್ಯಕ್ತಿ, ತಾನು ದೆಹಲಿಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಆತ ತಮಗೆ ವಿದೇಶದಿಂದ ಬೆಲೆಬಾಳುವ ಡೈಮಂಡ್ ಉಡುಗೊರೆ ಬಂದಿರುವುದಾಗಿ ಹೇಳಿದ್ದಾನೆ. 
ಅದನ್ನು ಸ್ವೀಕರಿಸಲು ಕೆಲವು ಶುಲ್ಕವನ್ನು ಪಾವತಿಸಬೇಕು. ಶುಲ್ಕ ತುಂಬದಿದ್ದಲ್ಲಿ ಜೈಲು ಶಿಕ್ಷೆಗೆ ಗುರಿಯಾಗುವಿರಿ ಎಂದು ಮಹಿಳೆಯನ್ನು ಹೆದರಿಸಿದ್ದಾನೆ.  

ಅಪರಿಚಿತನ ಮಾತು ನಂಬಿದ ಮಹಿಳೆ, ಆತ ಹೇಳಿರುವ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ 45.31 ಲಕ್ಷ ರೂ. ಪಾವತಿಸಿದ್ದರು. ಆದರೆ ಹಣ ಪಡೆದ ಬಳಿಕ ಆರೋಪಿಗಳು ಯಾವುದೇ ಉಡುಗೊರೆಯನ್ನು ಕಳುಹಿಸಿಲ್ಲ. ಅಲ್ಲದೆ ಕರೆ ಮಾಡಿದರೆ ಮೊಬೈಲ್ ಸ್ವಿಚ್‌ ಆಫ್ ಮಾಡಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. 

ವಂಚನೆಗೊಳಗಾದ ಮಹಿಳೆ ನೀಡಿರುವ ದೂರಿನಂತೆ ಸೈಬರ್ ಠಾಣಾ ಪೊಲೀಸರು ಆರೋಪಿಗಳಾದ ಅಲೆಕ್ಸ್ ಎರಿಕ್, ವೀರ್ ಪಾಲ್, ಬೆನ್ ಹಾಗೂ ಮಥುರಾ ಅನಿವರ್ ಎಂಬವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article