ಭಾರತ ಸೇವಾದಳ ವತಿಯಿಂದ ನೆಹರೂ ಜಯಂತಿ, ಮಕ್ಕಳ ದಿನಾಚರಣೆ
ಮಂಗಳೂರು ಭಾರತ ಸೇವಾದಳ ನಗರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಿತು.
ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ ನೆಹರೂ ಜನ್ಮದಿನಾಚರಣೆ ಮತ್ತು ಮಕ್ಕಳ ದಿನಾಚರಣೆಯ ಪ್ರಯುಕ್ತ ನಗರದ ಪಾಂಡೇಶ್ವರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಕಾರ್ಪೋರೇಶನ್ ಬ್ಯಾಂಕ್ ಕೇಂದ್ರ ಕಚೇರಿ) ಮುಂದಿನ ನೆಹರೂ ಪ್ರತಿಮೆಗೆ ಹಾರ ಅರ್ಪಣೆ ಮಾಡಲಾಯಿತು.
ಭಾರತ ಸೇವಾದಳ ದ.ಕ. ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಜೆ. ಆರ್. ಲೋಬೊ, ನೆಹರೂ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ದ ಹೋರಾಡಿದ್ದರು. ಅಲ್ಲದೆ, ಸುಮಾರು 10 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದರು ಎಂದು ಹೇಳಿದರು.
ಸ್ವತಂತ್ರ ಭಾರತದ ಅಭಿವೃದ್ಧಿಗಾಗಿ ಬುನಾದಿ ಹಾಕಿ ನೆಹರೂ ಅನೇಕ ಪುರೋಗಾಮಿ ಯೋಜನೆಗಳನ್ನು ಜಾರಿಗೆ ತಂದರು. ಅವರು ದೇಶಕ್ಕೋಸ್ಕರ ಮಾಡಿದ ಸೇವೆಯನ್ನು ನಾವೆಲ್ಲರೂ ಸ್ಮರಿಸಿಕೊಂಡು, ಅವರ ತತ್ವ, ಸಿದ್ಧಾಂತ ಅನುಸರಿಸೋಣ ಎಂದು ಹೇಳಿದರು.
ಮಂಗಳೂರು ತಾಲೂಕು ಸೇವಾದಳ ಅಧ್ಯಕ್ಷ ಪ್ರಭಾಕರ ಶ್ರೀಯಾನ್, ಜಿಲ್ಲಾ ಕಾರ್ಯದರ್ಶಿ ಟಿ. ಕೆ. ಸುಧೀರ್, ಉಪಾಧ್ಯಕ್ಷೆ ವಿಜಯ ಲಕ್ಷ್ಮಿ, ಸಂಘಟಕ ಮಂಜೇಗೌಡ, ಉದಯ್ ಕುಂದರ್, ಪ್ರೇಮ್ ಚಂದ್, ಕೃತಿನ್ ಕುಮಾರ್, ಸುನೀಲ್ ದೇವಾಡಿಗ, ಶಾಲಾ ಶಿಕ್ಷಕಿಯರಾದ ಸುಮಾ, ಪಾವನ ಉಪಸ್ಥಿತರಿದ್ದರು.
