-->

ಪೊಲೀಸ್ ಕಮಿಷನರ್ 'ಕ್ಯಾಲಿಫೋರ್ನಿಯಂ'ನ್ನು ಬರಿಗೈಲಿ ಮುಟ್ಟದಿರಿ, ಮರಳಿನಲ್ಲಿ ಮುಚ್ಚಿಡಿ ಎಂದಿದ್ದೇ ಮುಟ್ಟಿದ ಪೊಲೀಸರ ಎದೆಯಲ್ಲಿ ಢವ...ಢವ...!

ಪೊಲೀಸ್ ಕಮಿಷನರ್ 'ಕ್ಯಾಲಿಫೋರ್ನಿಯಂ'ನ್ನು ಬರಿಗೈಲಿ ಮುಟ್ಟದಿರಿ, ಮರಳಿನಲ್ಲಿ ಮುಚ್ಚಿಡಿ ಎಂದಿದ್ದೇ ಮುಟ್ಟಿದ ಪೊಲೀಸರ ಎದೆಯಲ್ಲಿ ಢವ...ಢವ...!

ಹುಬ್ಬಳ್ಳಿ: ಹೊಳೆಯುತ್ತಿದ್ದ ಆ ಕಲ್ಲನ್ನು ಆರೋಪಿ ‘ಕ್ಯಾಲಿಫೋರ್ನಿಯಂ’ ಎಂದು ಹೇಳಿರುವ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಕಮಿಷನರ್ ‘ಅದು ರೇಡಿಯೋ ಆ್ಯಕ್ಟಿವ್​ ಮೆಟಿರಿಯಲ್​ (ವಿಕಿರಣ ಸೂಸುವ ವಸ್ತು) ಅದನ್ನು ಬರಿಗೈಲಿ ಮುಟ್ಟದಿರಿ ಮರಳಿನಡಿಯಲ್ಲಿ ಮುಚ್ಚಿಬಿಡಿ’ ಎಂದು ಪೊಲೀಸ್ ಸಿಬ್ಬಂದಿಗೆ ಹೇಳಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆ ಕಲ್ಲನ್ನು ಕೈಯ್ಯಲ್ಲಿ ಮುಟ್ಟಿ ಪರಿಶೀಲನೆ ಮಾಡಿರುವ ಪೊಲೀಸರಲ್ಲಿ ಎದೆಯಲ್ಲಿ ಢವಢವ ಶುರುವಾಗಿದೆ.

ಹೌದು ಇಂತದ್ದೊಂದು ಘಟನೆ ನಡೆದಿರೋದು, ಹುಬ್ಬಳ್ಳಿಯಲ್ಲಿ.  ಕೊಪ್ಪಳ ಮೂಲದ ಮೌನೇಶ ಶಿವಪ್ಪ ಅರ್ಕಾಚಾರಿ ಎಂಬಾತನನ್ನು ಹುಬ್ಬಳ್ಳಿಯ ಶಹರದಲ್ಲಿ ಬಂಧಿಸಿರುವ ಪೊಲೀಸರು ಆತನ ಬಳಿಯಿದ್ದ 1039 ಗ್ರಾಂ ತೂಕದ 9 ಹೊಳೆಯುವ​ ಕಲ್ಲುಗಳನ್ನು  ವಶಪಡಿಸಿಕೊಂಡಿದ್ದಾರೆ. ಆ ಕಲ್ಲಿನ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿ ಮೌನೇಶ ಶಿವಪ್ಪ ಅರ್ಕಾಚಾರಿ ಕ್ಯಾಲಿಫೋರ್ನಿಯಂ ಎಂದಿದ್ದಾನೆ.‌ ಆತ ಈ ಹೊಳೆಯುವ ಕಲ್ಲುಗಳನ್ನು ಚೀಲದಲ್ಲಿ ತುಂಬಿಕೊಂಡು ಶಹರಗೆ ತಂದು ಇದು ‘ಕ್ಯಾಲಿಫೋರ್ನಿಯಂ’ ಎಂಬ ವಸ್ತು. ಈ ಕಲ್ಲಿನಲ್ಲಿ ಚಿನ್ನವಿದೆ ಎಂದು ನಂಬಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ.‌

ಈ ಬಗ್ಗೆ ಮಾಹಿತಿ ಪಡೆದ ಶಹರ ಠಾಣೆಯ ಇನ್​ಸ್ಪೆಕ್ಟರ್​ ಆನಂದ ಒನಕುದ್ರೆ ಹಾಗೂ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ವಶಪಡಿಸಿಕೊಂಡಿದ್ದ 9 ಕಲ್ಲುಗಳನ್ನು ಠಾಣೆಯ ಅಧಿಕಾರಿ ಸಹಿತ ಸಿಬ್ಬಂದಿ ಬರಿಗೈಯಲ್ಲಿ ಮುಟ್ಟಿ ತಪಾಸಣೆ ನಡೆಸಿದ್ದರು. ಈ ವಿಚಾರವನ್ನು ಇನ್​ಸ್ಪೆಕ್ಟರ್​ ಆನಂದ ಒನಕುದ್ರೆಯವರು ತಕ್ಷಣ ಪೊಲೀಸ್​ ಕಮಿಷನರ್ ಲಾಭೂರಾಮ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ವಶಪಡಿಸಿಕೊಂಡ ವಸ್ತುವಿನ ಹೆಸರು ‘ಕ್ಯಾಲಿಫೋರ್ನಿಯಂ’ ಎಂದು ಆರೋಪಿ ಹೇಳುತ್ತಿದ್ದಾನೆ ಎನ್ನುತ್ತಿದ್ದಂತೆ ಪೊಲೀಸ್ ಕಮಿಷನರ್ ‘ಅದು ರೇಡಿಯೋ ಆ್ಯಕ್ಟಿವ್​ ಮಟಿರಿಯಲ್​ (ವಿಕಿರಣ ಸೂಸುವ ವಸ್ತು) ಅದನ್ನು ಬರಿಗೈಯಲ್ಲಿ ಮುಟ್ಟಬೇಡಿ; ಮರಳಿನಲ್ಲಿ ಮುಚ್ಚಿಡಿ’ ಎಂದಿದ್ದಾರೆ.

ಈ ರೀತಿ ಹೇಳುತ್ತಿದ್ದಂತೆ ಪೊಲೀಸರಲ್ಲಿ ಆತಂಕ ಶುರುವಾಗಿದೆ. ಕ್ಯಾಲಿಫೋರ್ನಿಯಂ ಬಗ್ಗೆ ಗೂಗಲ್​ನಲ್ಲಿ ತಡಕಾಡಿದ ಪೊಲೀಸರು ಅದರ ಶಕ್ತಿಯನ್ನು ತಿಳಿದು ಮತ್ತಷ್ಟು ಬೆಚ್ಚಿ ಬಿದ್ದಿದ್ದಾರೆ. “ನಾನು ಮುಟ್ಟಿದ್ದೇನೆ, ನೀನು ಮುಟ್ಟಿದ್ದೀಯಾ?.. ಮುಂದೆ ಏನಾಗುತ್ತದೋ ಏನು ಕಥೆಯೋ..” ಎಂದು ಎಲ್ಲರೂ ಭಯಪಟ್ಟುಕೊಂಡಿದ್ದಾರೆ.  

ಆ ತಕ್ಷಣವೇ ಈ ಹೊಳೆಯುವ ಕಲ್ಲನ್ನು ಪರೀಕ್ಷಿಸಲೆಂದು ಕಿಮ್ಸ್​ನ ಲ್ಯಾಬ್​ಗೆ ರವಾನಿಸಲಾಯಿತು. ಪರೀಕ್ಷಿಸಿದ ವೈದ್ಯರು ಇದು ಕ್ಯಾಲಿಫೋರ್ನಿಯಂ ಅಲ್ಲ. ಕೇವಲ ಹೊಳೆಯುವ ಕಲ್ಲು ಎಂದು ಖಚಿತ ಪಡಿಸಿದ್ದಾರೆ. ಧಾರವಾಡದ ಕರ್ನಾಟಕ ವಿವಿ ಪ್ರಯೋಗಾಲಯವೂ ಪರೀಕ್ಷಿಸಿ ಇದು ಕ್ಯಾಲಿಫೋರ್ನಿಯಂ ಅಲ್ಲವೆಂದು ಖಾತ್ರಿ ಪಡಿಸಿದ್ದಾರೆ. ಅಷ್ಟು ಹೇಳುತ್ತಿದ್ದಂತೆ ಪೊಲೀಸರು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. 

ಅಷ್ಟುಕ್ಕೂ ಕ್ಯಾಲಿಫೋರ್ನಿಯಂ ಎಂದದ್ದಕ್ಕೆ ಪೊಲೀಸರು ಬೆಚ್ಚಿಬಿದ್ದಿರೋದೇಕೆ ಗೊತ್ತೇ?. ಕ್ಯಾಲಿಫೋರ್ನಿಯಂ ಎಂಬುದು ರೇಡಿಯೋ ಆ್ಯಕ್ಟಿವ್​ ಮಟಿರಿಯಲ್​ (ವಿಕಿರಣ ಸೂಸುವ ವಸ್ತು). ಇದು ಕೃತಕವಾಗಿ ಸೃಷ್ಟಿಸಲ್ಪಟ್ಟ ವಿಕಿರಣಶೀಲ ಲೋಹ. ಯುರೇನಿಯಂ ಬಳಿಕ ಅತಿ ಹೆಚ್ಚು ಪರಮಾಣು ಸಂಖ್ಯೆಯನ್ನು ಹೊಂದಿರುವ ವಸ್ತು ಕ್ಯಾಲಿಫೋರ್ನಿಯಂ. ಆದ್ದರಿಂದಲೇ ಮಾರುಕಟ್ಟೆಯ ಇದಕ್ಕೆ ಮೌಲ್ಯ ಅಧಿಕ. ಇದನ್ನು ಬರಿಗೈಯಲ್ಲಿ ಮುಟ್ಟಿದರೆ ಕ್ಯಾನ್ಸರ್​ನಂಥ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯಿದೆ. ಬರಿಗಣ್ಣಿನಲ್ಲಿ ನೋಡಿದರೆ ದೃಷ್ಟಿ ಹೀನತೆಯಾಗುವ ಸಾಧ್ಯತೆ ಇದೆ. 

1950ರಲ್ಲಿ ಅಮೆರಿಕಾದ ಕ್ಯಾಲಿಫೋರ್ನಿಯಾದ ಲಾರೆನ್ಸ್​ ರ್ಬಕೆಲಿ ನ್ಯಾಷನಲ್​ ಲ್ಯಾಬ್ ನಲ್ಲಿ ಈ ಹೊಳೆಯುವ ಕಲ್ಲನ್ನು ಸಂಶೋಧಿಸಲಾಗಿತ್ತು. ಹಾಗಾಗಿ, ಇದಕ್ಕೆ ಕ್ಯಾಲಿಪೋರ್ನಿಯಂ ಎಂದು ನಾಮಕರಣ ಮಾಡಲಾಗಿದೆ. 1 ಗ್ರಾಂ ಕ್ಯಾಲಿಫೋರ್ನಿಯಂ ಬೆಲೆ ಬರೋಬ್ಬರಿ 17 ಕೋಟಿ ರೂ. ಎನ್ನುತ್ತವೆ ಮೂಲಗಳು. 

ಕೊಪ್ಪಳದ ಕ್ವಾರೆಯಲ್ಲಿ ಈ ಹೊಳೆಯುವ ಕಲ್ಲುಗಳು ಸಿಕ್ಕಿತ್ತು ಎಂದು ಕೊನೆಗೂ ಮೌನೇಶ ಒಪ್ಪಿಕೊಂಡಿದ್ದಾನೆ. ಆದರೆ, ಇದಕ್ಕೆ ಕ್ಯಾಲಿಪೋರ್ನಿಯಂ ಎಂದೇಕೆ ಹೇಳಿದ್ದಾನೆಂದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಶಹರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article