ಇನ್‌ಸ್ಟಾಗ್ರಾಮ್‌ಗೆ ವೀಡಿಯೋ ಚಿತ್ರೀಕರಣ ಮಾಡಲು ಗೂಡ್ಸ್ ರೈಲು ವ್ಯಾಗನ್ ಹತ್ತಿದ ಬಾಲಕ ವಿದ್ಯುತ್ ಆಘಾತಕ್ಕೆ ಬಲಿ

ಅಹಮದಾಬಾದ್: ಇನ್‌ಸ್ಟಾಗ್ರಾಮ್‌ಗೆ ಅಪ್ಲೋಡ್ ಮಾಡಲೆಂದು ವೀಡಿಯೋ ಚಿತ್ರೀಕರಣ ಮಾಡಲು ರೈಲಿನ ವ್ಯಾಗನ್‌ ಮೇಲೆ ಹತ್ತಿದ ಶಾಲಾ ಬಾಲಕನೊಬ್ಬ ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರೇಮ್ ಪಾಂಚಾಲ್ (15) ಮೃತ ಬಾಲಕ.

ಬಾಲಕ ವೀಡಿಯೋ ಚಿತ್ರೀಕರಣ ಮಾಡಲು ಸೋಮವಾರ ಸಂಜೆ ಸಬರಮತಿ ಯಾರ್ಡ್‌ನಲ್ಲಿ ನಿಂತಿದ್ದ ಗೂಡ್ಸ್ ರೈಲು ವ್ಯಾಗನ್‌ನ ಮೇಲೆ ಹತ್ತಿದ್ದಾನೆ. ಆಗ ಹೈ ವೋಲ್ಟೇಜ್ ಓವರ್‌ಹೆಡ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ ಎಂದು ರೈಲ್ವೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಪಾಂಚಾಲ್ ಇಲ್ಲಿನ ರಾನಿಪ್ ಪ್ರದೇಶಕ್ಕೆ ತನ್ನ ಸ್ನೇಹಿತನೊಂದಿಗೆ ಆಗಮಿಸಿದ್ದಾನೆ. ವೀಡಿಯೋ ಚಿತ್ರೀಕರಣ ಮಾಡಲು ರೈಲು ಹತ್ತಿದ ತಕ್ಷಣ ವಿದ್ಯುತ್ ಆಘಾತಕ್ಕೊಳಗಾಗಿದ್ದಾನೆ. ಪರಿಣಾಮ ಆತ ನೆಲಕ್ಕೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 

ಪಾಂಚಾಲ್ ತನ್ನ ಇನ್‌ಸ್ಟಾಗ್ರಾಮ್‌ಗಾಗಿ ವೀಡಿಯೊ ಚಿತ್ರೀಕರಿಸಲು ವ್ಯಾಗನ್‌ನ ಛಾವಣಿಯ ಮೇಲೆ ಹತ್ತಿದ್ದ ಎಂದು ಅವನ ಸ್ನೇಹಿತ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.