ಚರಂಡಿಯಲ್ಲಿದ್ದ ಹಸುಗೂಸುವನ್ನು ಕಂಡು ವಿಚಿತ್ರವಾಗಿ ಕೂಗಲು ಆರಂಭಿಸಿ ಜನರ ಗಮನ ಸೆಳೆದ ಬೆಕ್ಕುಗಳು!

ಮುಂಬೈ: ಬಟ್ಟೆಯೊಂದರಲ್ಲಿ ಸುತ್ತಿ ಚರಂಡಿಯೊಳಕ್ಕೆ ಎಸೆದಿರುವ ನವಜಾತ ಶಿಶುವೊಂದನ್ನು ಬೆಕ್ಕುಗಳು ಕಾಪಾಡಿರುವ ಕುತೂಹಲದ ಘಟನೆಯೊಂದು ಮುಂಬೈನ ಪಂತ್​ನಗರದಲ್ಲಿ ನಡೆದಿದೆ. 

ಆಗ ತಾನೆ ಹುಟ್ಟಿರುವ ಹಸುಳೆಯನ್ನು ಬಟ್ಟೆಯಲ್ಲಿ ಸುತ್ತಿ ಚರಂಡಿಗೆ ಎಸೆಯಲಾಗಿತ್ತು. ಇದು ಯಾರ ಗಮನಕ್ಕೆ ಬರಲು ಸಾಧ್ಯವಿರಲಿಲ್ಲ. ಮಗು ಕಾಣಿಸದ ಹಿನ್ನೆಲೆಯಲ್ಲಿ ಯಾರೂ ಅದನ್ನು ಅಷ್ಟಾಗಿ ಗಮನಿಸಿಯೂ ಇರಲಿಲ್ಲ. 

ಆದರೆ ಇದು ಬೀದಿಯಲ್ಲಿ ಹೋಗುತ್ತಿದ್ದ ಕೆಲವು ಬೆಕ್ಕುಗಳಿಗೆ ಅರಿವಾಗಿದೆ. ಅವುಗಳ ಚರಂಡಿಯ ಬಳಿ ಬಂದು ವಿಚಿತ್ರ ರೀತಿಯಲ್ಲಿ ಬೊಬ್ಬಿಡಲು ಆರಂಭಿಸಿವೆ. ಮೊದಲಿಗೆ ಜನರಿಗೆ ಬೆಕ್ಕುಗಳೇಕೆ ಈ ರೀತಿ ವಿಚಿತ್ರವಾಗಿ ಬೊಬ್ಬಿಡುತ್ತದೆ ಎಂದು ಗೊತ್ತಾಗಲಿಲ್ಲ. ಹಾಗಾಗಿ ಜನರು ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು. 

ಆದರೆ ಕೆಲವು ಬೆಕ್ಕುಗಳು ವಿಚಿತ್ರವಾಗಿ ಕೂಗಲು ಮುಂದುವರಿಸಿ ಜನರ ಗಮನವನ್ನು ಸೆಳೆಯಲು ಪ್ರಯತ್ನಿಸಿವೆ. ಇದನ್ನು ಗಮನಿಸಿದ ಹಲವರು ಅನುಮಾನಗೊಂಡು ಚರಂಡಿಯತ್ತ ಬಗ್ಗಿ ನೋಡಿದ್ದಾರೆ. ಆಗ ವಸ್ತ್ರದಲ್ಲಿ ಸುತ್ತಿಟ್ಟ ವಸ್ತುವೊಂದು ಗೋಚರವಾಗಿದೆ. ಮೊದಲಿಗೆ ಅದು ಹಸುಗೂಸು ಎಂದು ಅರಿವಾಗಿರಲಿಲ್ಲ. ಬಳಿಕ ಹೋಗಿ ನೋಡಿದಾಗ ಮಗು ಎನ್ನುವುದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಹಸುಗೂಸುವಿನ ರಕ್ಷಣೆ ಮಾಡಿದ್ದಾರೆ. ಈ ಕುರಿತು ಮುಂಬೈ ಪೊಲೀಸರು ಟ್ವೀಟ್​ ಮಾಡಿದ್ದಾರೆ. ಮಗುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.