
'ಪುನೀತ್' ಅಗಲಿಕೆ ಸಹಿಸಲಾಗದೆ 'APPU' ಎಂದು ಕೈಕುಯ್ದುಕೊಂಡು, ತನ್ನದೇ ರಕ್ತದಲ್ಲಿ 'ಐ ಲವ್ ಯೂ ಅಪ್ಪು' ಬರೆದ ವಿದ್ಯಾರ್ಥಿನಿ
11/03/2021 10:21:00 PM
ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಠಾತ್ ಮರಣ ಅವರ ಅಭಿಮಾನಿಗಳಿಗೆ ಅರಗಿಸಲು ಅಸಾಧ್ಯವಾಗಿದೆ. ಇದರ ಪರಿಣಾಮ ರಾಜ್ಯಾದ್ಯಂತ ಅಭಿಮಾನಿಗಳು ಹೃದಯಾಘಾತದಿಂದ ಮೃತಪಟ್ಟಿರುವ, ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಒಂದಿಲ್ಲೊಂದು ಕಡೆಗಳಲ್ಲಿ ಆಗುತ್ತಲೇ ಇದೆ.
ಪುನೀತ್ ಅಗಲಿಕೆಯ ಬೆನ್ನಿಗೆ ಅಭಿಮಾನಿಗಳಿಂದ ಅಭಿಮಾನದ ತೀವ್ರತೆ ಒಂದೊಂದಾಗಿ ಬಯಲಾಗುತ್ತಿದೆ. ಇದೀಗ ವಿದ್ಯಾರ್ಥಿನಿಯೋರ್ವಳು ಕೈಯಲ್ಲಿ ಬ್ಲೇಡ್ನಿಂದ APPU ಎಂದು ಕಾಣಿಸುವ ಹಾಗೆ ಕೈಯನ್ನು ಗೀರಿಕೊಂಡಿದ್ದಾಳೆ. ಅಲ್ಲದೆ ತನ್ನದೇ ರಕ್ತದಲ್ಲಿ ಕರವಸ್ತ್ರ ಹಾಗೂ ಬಿಳಿಯ ಹಾಳೆ ಮೇಲೆ 'ಐ ಲವ್ ಯೂ ಅಪ್ಪು, ಐ ಮಿಸ್ ಯೂ ಅಪ್ಪು' ಎಂದು ಬರೆದಿದ್ದಾಳೆ.
ಮೈಸೂರಿನ ಕಾಲೇಜೊಂದರ ಪಿಯುಸಿ ವಿದ್ಯಾರ್ಥಿನಿ ಯಶಸ್ವಿನಿ ತನ್ನ ಅಭಿಮಾನವನ್ನು ಕೈಯನ್ನು ಗೀರಿಕೊಂಡು ವ್ಯಕ್ತಪಡಿಸಿದ್ದಾಳೆ. ಮೂಲತಃ ಚಾಮರಾಜನಗರ ನಿವಾಸಿಯಾಗಿರುವ ಯಶಸ್ವಿನಿ ಮೈಸೂರಿನ ಹಾಸ್ಟೆಲ್ ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಈ ಹಾಸ್ಟೆಲ್ನಲ್ಲಿಯೇ ಕೃತ್ಯ ಎಸಗಿದ್ದಾಳೆ. ಇದೀಗ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಆಕೆ ಬ್ಲೇಡ್ ನಿಂದ ಕೈ ಕುಯ್ದುಕೊಂಡ ಪರಿಣಾಮ ವಿಪರೀತ ರಕ್ತಸ್ರಾವಗೊಂಡು ಅಸ್ವಸ್ಥಳಾಗಿದ್ದಳು. ತಕ್ಷಣ ಆಕೆಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸಣ್ಣದಿಂದಲೂ ಯಶಸ್ವಿನಿ ಪುನೀತ್ ಅಭಿಮಾನಿಯಾಗಿದ್ದಳು ಎಂದು ತಿಳಿದುಬಂದಿದೆ.