1985ರಲ್ಲಿ ಪುನೀತ್​​ ರಾಜ್‍ಕುಮಾರ್ 'ಲೋಹಿತ್' ಹೆಸರು ಬದಲಾಯಿಸಿದ್ದಾಗ ನೀಡಿದ್ದ ಜಾಹೀರಾತು ವೈರಲ್​

ಬೆಂಗಳೂರು: ಪುನೀತ್​ ರಾಜ್​ಕುಮಾರ್​ ಅವರು ಮೃತಪಡುತ್ತಿದ್ದಂತೆ ಹಿಂದೆ ಅವರ ಜೀವನದಲ್ಲಾದ ಘಟನೆಗಳು ಒಂದೊಂದಾಗಿ ಮೇಲ್ಪಂಕ್ತಿಗೆ ಬರಲು ಆರಂಭಿಸಿದೆ. ಇದೀಗ ಅವರ ಮೊದಲ ಹೆಸರಿನ ಬಗ್ಗೆ ಚರ್ಚೆ ಆರಂಭವಾಗಿದ್ದು, ಹೆಸರು ಬದಲಾವಣೆಯಾದಗ ನೀಡಿದ ಪತ್ರಿಕಾ ಜಾಹಿರಾತು ಕೂಡಾ ವೈರಲ್ ಆಗುತ್ತಿದೆ.

ಹೌದು ಪುನೀತ್ ರಾಜ್ ಕುಮಾರ್ ಮೊದಲ ಹೆಸರು ಲೋಹಿತ್​ ಎಂದಾಗಿತ್ತು. 'ಭಕ್ತ ಪ್ರಹ್ಲಾದ' ಸಿನಿಮಾದ ಟೈಟಲ್ ಕಾರ್ಡ್ ನಲ್ಲಿ ಮಾ.ಲೋಹಿತ್ ಎಂದೇ ಇತ್ತು. ಹೆಸರು ಬದಲಾವಣೆಯಾದ ಬಳಿಕದ 'ಪರಶುರಾಮ್' ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಎಂದು ಎಂಬುದು ಟೈಟಲ್ ಕಾರ್ಡ್ ನಲ್ಲಿ ಇರುವುದು ಕಾಣಬಹುದು. 

ಪುನೀತ್​ ರಾಜ್​ಕುಮಾರ್​ ಬಾಲನಟ ಆಗಿದ್ದಂದಿನಿಂದಲೂ ಪ್ರೇಕ್ಷಕರ ಮನ ಗೆದ್ದವರು. ಆಗ ಅವರ ಹೆಸರು ಲೋಹಿತ್​ ಎಂದಾಗಿತ್ತು. ಮನೆಯಲ್ಲಿ ಅವರನ್ನು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಆ ಬಳಿಕ ಅವರು ಪುನೀತ್​ ರಾಜ್​ಕುಮಾರ್​ ಎಂಬ ಹೆಸರಿನಿಂದ ದೇಶಾದ್ಯಂತ ಖ್ಯಾತಿ ಗಳಿಸಿದರು.  ಹೆಸರನ್ನು ಬದಲಾವಣೆ ಮಾಡಿದ ಸಂದರ್ಭದಲ್ಲಿ ನೀಡಿದ ಜಾಹೀರಾತಿನ ಪ್ರತಿ ವೈರಲ್​ ಆಗುತ್ತಿದೆ.

‘ಡಾ. ರಾಜ್​ಕುಮಾರ್​ ಉರುಫ್​ ಎಸ್​.ಪಿ. ಮುತ್ತುರಾಜ್​ ಆಗಿರುವ ನಾನು ನನ್ನ ಮಗ ಮಾಸ್ಟರ್​ ಲೋಹಿತ್​ ಹೆಸರನ್ನು ಇಂದಿನಿಂದ  ಅಂದರೆ ದಿನಾಂಕ 16-3-1985ರಂದು ಮಾಸ್ಟರ್​ ಪುನೀತ್​ ಎಂಬುದಾಗಿ ಬದಲಾಯಿಸುತ್ತೇನೆ. ಈ ಹೆಸರು ಬದಲಾವಣೆ ಬಗ್ಗೆ ನೋಟರಿ ಎಸ್​.ಬಿ. ಚಂದ್ರಶೇಖರ್​ ಅವರ ಸಮಕ್ಷಮದಲ್ಲಿ ಪ್ರಮಾಣ ಪತ್ರ ಮಾಡಿಸಿರುತ್ತೇನೆ’ ಎಂದು ಜಾಹೀರಾತು ನೀಡಲಾಗಿತ್ತು.

ಮೊದಲ ಬಾರಿಗೆ ಪುನೀತ್ ರಾಜ್​ಕುಮಾರ್​ ಅವರನ್ನು ಅಪ್ಪು ಎಂದು ಕರೆದಿದ್ದು ಅವರ ಅಜ್ಜಿಯಂತೆ. ರಾಜ್​ಕುಮಾರ್ ತಾಯಿ ಲಕ್ಷ್ಮಮ್ಮ ಅವರಿಗೆ ಪುನೀತ್​ ರಾಜ್‌ಕುಮಾರ್ ಎಂದರೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ ಅವರು ಮೊಮ್ಮಗನನ್ನು ಅಪ್ಪು ಎಂದು ಕರೆಯುತ್ತಿದ್ದರು. ಮನೆಮಂದಿಗೆಲ್ಲಾ  ಅಪ್ಪು ಎಂಬುದು‌ ಪ್ರೀತಿಯ ಹೆಸರು ಅಚ್ಚುಮೆಚ್ಚಾಗಿತ್ತು. ಪುನೀತ್​ ಮೃತಪಡುವ ಕೊನೆಯವರೆಗೂ ಅಪ್ಪು ಎಂಬ ಪೆಟ್​ ನೇಮ್​ ಶಾಶ್ವತವಾಗಿ ಉಳಿದಿತ್ತು. ಅವರು ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ಹೆಸರು ಕೂಡ ‘ಅಪ್ಪು’. ಆದರೆ ಇಂದು ಆ ಹೆಸರಿನಿಂದ ಕರೆಸಿಕೊಳ್ಳಲು ಅವರೇ ನಮ್ಮೊಂದಿಗಿಲ್ಲ.