ಯುವ ಜನತೆಯನ್ನು ಕಾಡುತ್ತಿದೆ ಹೃದಯಬೇನೆಯೆಂಬ ಪೆಡಂಭೂತ: ಚಿತ್ರದುರ್ಗದಲ್ಲಿ ಕಾಲೇಜಿಗೆ ಬಂದ 17 ವರ್ಷದ ಬಾಲಕ ಹೃದಯಾಘಾತದಿಂದ ಮೃತ್ಯು

ಚಿತ್ರದುರ್ಗ: ಇತ್ತೀಚಿನ‌ ದಿನಗಳಲ್ಲಿ ಹೃದಯಾಘಾತವು ಯುವಜನತೆಯನ್ನು ಪೆಡಂಭೂತವಾಗಿ ಕಾಡುತ್ತಿದೆ. ಯುವಕರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದ್ದು, ಅದಕ್ಕೆ ಪುಷ್ಠಿ ನೀಡುವಂತೆ ಘಟನೆ ಚಿತ್ರದುರ್ಗದಲ್ಲಿ ಕೇವಲ 17 ವರ್ಷದ ಬಾಲಕ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಇದು ಜನತೆಯನ್ನು ಆತಂಕಕ್ಕೆ ನೂಕಿದೆ. 

ಚಿತ್ರದುರ್ಗ ನಗರದ ನಿವಾಸಿ, ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರಕಾಶ್ ಮೃತ ವಿದ್ಯಾರ್ಥಿ. 

ಕಾಲೇಜಿಗೆ ಬಂದಿರುವ ಪ್ರಕಾಶ್​, ಏಕಾಏಕಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದ. ತಕ್ಷಣ ಆಸ್ಪತ್ರೆಗೆ ಕರೆದು ಕೊಂಡೊಯ್ಯಲಾಯಿತಾದರೂ, ಮಾರ್ಗ ಮಧ್ಯೆ ಆತ ಮೃತಪಟ್ಟಿದ್ದಾನೆ. ನಟ ಪುನೀತ್​ ರಾಜ್‌ಕುಮಾರ್ ಅವರಿಗೆ ಕಾಣಿಸಿಕೊಂಡಂತೆ ತಕ್ಷಣಕ್ಕೆ ಪ್ರಕಾಶ್​ಗೂ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವುದರೊಳಗೆ ಆತ ಮೃತಪಟ್ಟಿದ್ದಾನೆ.

ಪ್ರಕಾಶ್​  ಎಂದಿನಂತೆಯೇ ಇಂದು ಬೆಳಗ್ಗೆ ಕಾಲೇಜಿಗೆ ಬಂದಿದ್ದ. ಕಾಲೇಜು ಮೆಟ್ಟಿಲೇರುವಾಗಲೇ ಸುಸ್ತಾಗಿ ಕುಳಿತಿದ್ದಾನೆ. ತಕ್ಷಣ ಕಾಲೇಜು ಸಿಬ್ಬಂದಿ ಪಾಲಕರಿಗೆ ತಿಳಿಸಿದ್ದಾರೆ. ಅವರು ಶಾಲೆಗೆ ಧಾವಿದಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಖಾಸಗಿ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಕರೆದೊಯ್ಯವ ಮಾರ್ಗ ಮಧ್ಯೆ ಆತ ಮೃತಪಟ್ಟಿದ್ದಾನೆ.