ವಾಲಿಬಾಲ್ ಆಟಗಾರ್ತಿಯೊಬ್ಬಳ ಶಿರಚ್ಛೇದನ ಉಗ್ರರು: ಅಫ್ಘಾನ್ ನಲ್ಲಿ ತಾಲಿಬಾನಿಗಳ ಕ್ರೌರ್ಯದ ಪರಾಕಾಷ್ಠೆ

ಕಾಬುಲ್: ಅಪಘಾನಿಸ್ತಾನವು ತಾಲಿಬಾನಿಗಳ ಕೈವಶವಾಗುತ್ತಿದ್ದಂತೆ ಅಲ್ಲಿ ಅವರ ಕ್ರೌರ್ಯವು ಪರಾಕಾಷ್ಠೆ ತಲುಪಿದೆ. ಇತ್ತೀಚಿಗೆ ತಾಲಿಬಾನಿ ಉಗ್ರರು ವಾಲಿಬಾಲ್ ಆಟಗಾರ್ತಿಯೊಬ್ಬಳ ಶಿರಚ್ಛೇದನ ಮಾಡಿದ್ದಾರೆ ಎಂಬ ಸುದ್ದಿಯೊಂದು ವರದಿಯಾಗಿದೆ.

ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ತಂಡದ ಸದಸ್ಯೆ ಮಹ್ಜಬಿನ್ ಹಕಿಮಿಯನ್ನು ಅಕ್ಟೋಬರ್ ಮೊದಲ ವಾರದಲ್ಲಿ ಅಮಾನುಷವಾಗಿ ರುಂಡ ಕತ್ತರಿಸಿ ಹತ್ಯೆ ಮಾಡಲಾಗಿದೆ. ರಕ್ತಸಿಕ್ತವಾಗಿರು ಆಕೆಯ ರುಂಡ-ಮುಂಡಗಳು ಬೇಧಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪುತ್ರಿಯ ಹತ್ಯೆಯ ಬಗ್ಗೆ ಎಲ್ಲೂ ಬಾಯಿಬಿಡದಂತೆ ಆಕೆಯ ಕುಟುಂಬದವರನ್ನು ಬೆದರಿಸಲಾಗಿದೆ. ಅಫ್ಘಾನ್ ದೇಶವು ತಾಲಿಬಾನಿಗಳ ವಶವಾಗುತ್ತಿದ್ದಂತೆ ಉಗ್ರರು ಮಹಿಳಾ ಕ್ರೀಡಾಪಟುಗಳನ್ನು ಗುರಿಯಾಗಿರಿಸಿಕೊಂಡಿದ್ದಾರೆ ಎಂದು ವಾಲಿಬಾಲ್ ತರಬೇತಿದಾರೊಬ್ಬರು ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಫ್ಘಾನ್ ತಾಲಿಬಾನ್ ವಶವಾಗುವುದಕ್ಕಿಂತ ಮೊದಲು ಹತ್ಯೆಯಾಗಿರುವ ಮಹ್ಜಬಿನ್ ಕಾಬುಲ್ ಮುನ್ಸಿಪಾಲ್ಟಿ ವಾಲಿಬಾಲ್ ಕ್ಲಬ್​ನ ಸ್ಟಾರ್ ಆಟಗಾರ್ತಿಯಾಗಿದ್ದರು. ರಾಷ್ಟ್ರೀಯ ಜೂನಿಯರ್ ಮಹಿಳಾ ತಂಡವು ದೇಶ-ವಿದೇಶಗಳ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿತ್ತು. 

ತಾಲಿಬಾನ್ ಹಿಡಿತ ಹೆಚ್ಚುತ್ತಿದ್ದಂತೆಯೇ ತಂಡದ ಇಬ್ಬರು ಸದಸ್ಯೆಯರು ಬೇರೆ ದೇಶಕ್ಕೆ ಹೋಗಲು ಯಶಸ್ವಿಯಾಗಿದ್ದಾರೆ. ಅನೇಕರು ಜೀವಭಯದಿಂದ ಇನ್ನೂ ಅಜ್ಞಾತರಾಗಿದ್ದಾರೆ‌. ಹಲವರು ಕಣ್ಮರೆಯಾಗಿದ್ದಾರೆಂದು ಮಾಧ್ಯಮಕ್ಕೆ ತರಬೇತುದಾರರು ತಿಳಿಸಿದ್ದಾರೆ.