
ತಂಗಿಯನ್ನು ಪ್ರೀತಿಸಿದ ಯುವಕನ ಹತ್ಯೆ ಮಾಡಿದ ಯುವಕರು- ಮುಂದೇನಾಯಿತೆಂದರೆ....
10/30/2021 09:01:00 PM
ಕಲ್ಬುರ್ಗಿ; ತಂಗಿಯನ್ನು ಪ್ರೀತಿಸಿದ ಕಾರಣಕ್ಕೆ ಆಕೆಯ ಪ್ರಿಯತಮನನ್ನು ಹತ್ಯೆ ಮಾಡಿದ ಅಣ್ಣ ಸೇರಿದಂತೆ ಐವರನ್ನು ವಿವಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 27ರಂದು ಕಲಬುರಗಿ ಹೊರವಲಯದ ಸೇಡಂ ರಸ್ತೆಯ ಕಾಳನೂರು ಡಾಬಾ ಬಳಿ ಫಿಲ್ಟರ್ ಬೆಡ್ ನಿವಾಸಿ ಆಕಾಶ್ ಎಂಬಾತನ ಕೊಲೆ ನಡೆದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿದ ವಿವಿ ಠಾಣೆ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಹತ್ಯೆಯಲ್ಲಿ ಪ್ರಮುಖ ಆರೋಪಿ ಶ್ರೀನಿಧಿ ಎಂಬಾತ. ಈತ ಸಹೋದರ ನಿಖಿಲ್, ಬಸವರಾಜ್ ಹಾಗೂ ವಿಜಯಕುಮಾರ್, ಪ್ರದೀಪ್ ಜೊತೆಗೆ ಸೇರಿ ಈ ಕೊಲೆಯನ್ನು ನಡೆಸಿದ್ದ. ಇದೀಗ ಈ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಆಕಾಶ್ ಎಂಬ ಹುಡುಗ ಖರ್ಗೆ ಸರ್ಕಲ್ ಬಳಿ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ. ಈತ ಹುಡುಗಿ ಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಮನೆಯಿಂದ ಕರೆದುಕೊಂಡು ಹೋಗಿ ಮತ್ತೆ ಮನೆಗೆ ಬಂದು ಬಿಟ್ಟಿದ್ದ. ಇದರಿಂದ ಕೆರಳಿದ ಆಕೆಯ ಅಣ್ಣ ಆರೋಪಿ ಶ್ರೀನಿಧಿ ಈತನನ್ನು ಕೊಲೆಗೈದಿದ್ದಾನೆ.
ಅಕ್ಟೋಬರ್ 27ರಂದು ಸಂಜೆ ಗ್ಯಾರೇಜ್‌ನಲ್ಲಿದ್ದ ಆಕಾಶ್‌ನನ್ನು ಬಲವಂತವಾಗಿ ಬೈಕ್ ಮೇಲೆ ಕಾಳನೂರು ಡಾಬಾ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹತ್ಯೆಗೈದಿದ್ದಾನೆ. ಚಾಕುವಿನಿಂದ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದಾನೆ.
ಇದೀಗ ಐವರನ್ನು ಬಂಧಿಸಿದ ಪೊಲೀಸರು ಅವರ ಬಳಿಯಿಂದ ಚಾಕು, ಬೈಕ್, ಆಟೋ ವಶಪಡಿಸಿಕೊಂಡಿದ್ದಾರೆ.