ಮದ್ಯಪಾನದ ಮತ್ತಿನಲ್ಲಿ‌‌ ಹಲ್ಲೆ ನಡೆಸಿ ಪತ್ನಿಯ ಕೊಲೆ: ನೇಣಿಗೆ ಶರಣಾಗಿ ಪತಿಯೂ ಆತ್ಮಹತ್ಯೆ

ಬೆಂಗಳೂರು: ಮದ್ಯಸೇವನೆ ಮಾಡಿರುವ ಮತ್ತಿನಲ್ಲಿದ್ದ ಪತಿಯೋರ್ವನು ಪತ್ನಿ ಹಲ್ಲೆ ನಡೆಸಿ ಆಕೆ ಮೃತಪಟ್ಟ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯ ಕುಂಚಿತಿಗರಪಾಳ್ಯದಲ್ಲಿ ನಡೆದಿದೆ. 

ಸಾತನೂರು ಕುಂಚಿತಿಗರಪಾಳ್ಯದ ನಿವಾಸಿ ರೋಜಾ (32) ಹತ್ಯೆಯಾದ ದುರ್ದೈವಿ. ಆರೋಪಿ ಮಂಜುನಾಥ್ (32) ಆತ್ಮಹತ್ಯೆಗೆ ಶರಣಾದವ.   

ಆರೋಪಿ ಮಂಜುನಾಥ್ ಮಳವಳ್ಳಿ ಮೂಲದ ರೋಜಾರನ್ನು 4 ವರ್ಷಗಳ ಹಿಂದೆ ಮದುವೆಯಾಗಿದ್ದ. ಆದರೆ ಮಂಜುನಾಥ್ ಮದ್ಯಸೇವನೆ ಮಾಡಿ ಪ್ರತಿನಿತ್ಯ ಪತ್ನಿಯೊಂದಿಗೆ ಜಗಳವಾಡುತ್ತಾ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಭಾನುವಾರವೂ ಮಧ್ಯಾಹ್ನ ಎಂದಿನಂತೆ ಮಂಜುನಾಥ್ ಮದ್ಯ ಸೇವಿಸಿ ಬಂದು ಪತ್ನಿಯೊಂದಿಗೆ ಜಗಳ ಮಾಡಿದ್ದಾನೆ. ಪತ್ನಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಆಕೆಗೆ ಹಲ್ಲೆ ನಡೆಸಿ ತಳ್ಳಿದ್ದಾನೆ‌. ಪರಿಣಾಮ ರೋಜಾ ಕಬೋರ್ಡ್ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಳೆ ಎಂದು ಶಂಕಿಸಲಾಗಿದೆ.  


ಪತ್ನಿ ಮೃತಪಟ್ಟಿರುದರಿಂದ ಆತಂಕಗೊಂಡ ಮಂಜುನಾಥ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಂಪತಿ ಮಧ್ಯೆ ನಿತ್ಯವೂ ಜಗಳ ನಡೆಯುತ್ತಿರುವುದರ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಗಿಲು ಒಡೆದು ಪರಿಶೀಲನೆ ನಡೆಸಿದಾಗ ಮಂಜುನಾಥ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದೇ ರೀತಿ ರೋಜಾ ಮೃತದೇಹ ಮನೆಯ ಹಾಲ್‌ನಲ್ಲಿ ಬಿದ್ದಿತ್ತು. ಅಲ್ಲದೆ ಕಬೋರ್ಡ್‌ನಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ. ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.