ಮಂಗಳೂರು: ಪಿಎಚ್‌ಡಿ ವಿದ್ಯಾರ್ಥಿನಿ ಭಾವಚಿತ್ರ ಎಡಿಟ್ ಮಾಡಿ ಕಿರುಕುಳ: ಆಂಧ್ರದ ಪ್ರಾಧ್ಯಾಪಕ ಅರೆಸ್ಟ್

ಮಂಗಳೂರು: ಪಿಎಚ್‌ಡಿ ವಿದ್ಯಾರ್ಥಿನಿಯ ಭಾವಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ಆಕೆಗೆ ಕರೆ ಮಾಡಿ ಕಿರುಕುಳ ನೀಡುತ್ತಿರುವ ಆರೋಪದಲ್ಲಿ ಆಂಧ್ರಪ್ರದೇಶದ ಪ್ರಾಧ್ಯಾಪಕನೋರ್ವನನ್ನು ಮಂಗಳೂರು ನಗರ ಸೈಬರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿವಿಯ ಪ್ರಾಧ್ಯಾಪಕ ಡಾ.ಕೊಂಡೂರು ಸುಧೀರ್ ಕುಮಾರ್ ಬಂಧಿತ ಆರೋಪಿ. ಸಂತ್ರಸ್ತ ವಿದ್ಯಾರ್ಥಿನಿ ಮಂಗಳೂರಿನ ಪ್ರಾಧ್ಯಾಪಕಿಯೊಬ್ಬರ ಮಾರ್ಗದರ್ಶನದಲ್ಲಿ 2019ರಿಂದ ಪಿಎಚ್‌ಡಿ ಮಾಡುತ್ತಿದ್ದರು. ಆದರೆ 2018ರಲ್ಲಿ ಪರಿಚಯಗೊಂಡ ಆರೋಪಿ ಡಾ. ಸುಧೀರ್ ಕುನಾರ್ ಕೊಂಡೂರು ತನ್ನನ್ನೇ ಪಿಎಚ್ ಡಿ ಮಾರ್ಗದರ್ಶಕನಾಗಿ ಆಯ್ಕೆ ಮಾಡುವಂತೆ ಆಕೆಯಲ್ಲಿ ಒತ್ತಾಯಿಸುತ್ತಿದ್ದ. ಇದಕ್ಕೆ ಒಪ್ಪಿರುವ ವಿದ್ಯಾರ್ಥಿನಿ ಮಂಗಳೂರು ವಿವಿಗೆ ಅನುಮತಿಗೆ ಆತನ ಹೆಸರನ್ನು ದಾಖಲೆಯಲ್ಲಿ ನಮೂದಿಸಿದ್ದಳು. ಆದರೆ ವಿವಿ ಆ ವ್ಯಕ್ತಿಗೆ ಅರ್ಹತೆಯಿಲ್ಲ ಎನ್ನುವ ಕಾರಣಕ್ಕೆ ಆಕೆಯ ಕೋರಿಕೆಯನ್ನು ನಿರಾಕರಿಸಿತ್ತು. ಇದಾದ ಬಳಿಕ ಆತ ವಿದ್ಯಾರ್ಥಿನಿಗೆ ಮತ್ತು ಆಕೆಯ ಮನೆಯವರಿಗೆ ಕಿರುಕುಳ ನೀಡಲು ಆರಂಭಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೆ ಆತ ವಿದ್ಯಾರ್ಥಿನಿಯ ಭಾವಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿ ಮಾಡಿದ್ದಾನೆ ಎಂದು ಆರೋಪಿಸಿ ಆಕೆಯ ಮನೆಯವರು ನಗರದ ಸೈಬರ್ ಠಾಣೆಗೆ 2021ರ ಮಾರ್ಚ್ 10ರಂದು ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮೇಲೆ ಬಿಡುಗಡೆಗೊಳಿಸಿದೆ.
BREAKING NEWS
Loading latest news...
Join our WhatsApp Channel Powered By : Online Pudu