-->

ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ: ಆರೋಪಿಯನ್ನು ಖುಲಾಸೆ ಮಾಡಿರುವ ಆದೇಶ ರದ್ದುಪಡಿಸಿದ ಹೈಕೋರ್ಟ್

ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ: ಆರೋಪಿಯನ್ನು ಖುಲಾಸೆ ಮಾಡಿರುವ ಆದೇಶ ರದ್ದುಪಡಿಸಿದ ಹೈಕೋರ್ಟ್

ಚಿಕ್ಕಮಗಳೂರು: ಅಪ್ತಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಯುವಕನನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಜಿಲ್ಲಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್, ಪ್ರಕರಣದ ಮರು ವಿಚಾರಣೆ ನಡೆಸುವಂತೆ ಆದೇಶಿಸಿದೆ.

ಚಿಕ್ಕಮಗಳೂರು ಜಿಲ್ಲಾ ಹೆಚ್ಚುವರಿ ಸೆಷನ್ಸ್ ಮತ್ತು ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್ ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ಪ್ರಕರಣದಲ್ಲಿ ಆರೋಪಿ ಎಸಗಿರುವ ಅಪರಾಧ ಕೃತ್ಯಗಳನ್ನು ಸಾಬೀತುಪಡಿಸಲು ಅಗತ್ಯ ಸಾಕ್ಷ್ಯಾಧಾರಗಳನ್ನು ಪ್ರಸ್ತುತಪಡಿಸಲು ವಿಚಾರಣಾ ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಿಲ್ಲ. ಆರೋಪಿಯ ಡಿಎನ್‌ಎ ತಪಾಸಣೆ ಮಾಡಿಲ್ಲ. ಸಂತ್ರಸ್ತೆ ತಪಾಸಣೆ ನಡೆಸಿರುವ ವೈದ್ಯರು ಸೇರಿದಂತೆ ಇತರೆ ಸಾಕ್ಷಿಗಳನ್ನು ಪರಿಶೀಲನೆ ನಡೆಸಲು ಅವಕಾಶ ನೀಡಿಲ್ಲ. 

ಸಂತ್ರಸ್ತೆ ಬಾಲಕಿಯ ಕುಟುಂಬದವರೇ ಪ್ರತಿಕೂಲ ಸಾಕ್ಷಿ ನುಡಿದಿದ್ದಾರೆಂದು ಉಳಿದ ಸಾಕ್ಷಿಗಳ ಪರಿಶೀಲನೆಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರಲಿಲ್ಲ. ಇದು ವಿಚಾರಣಾ ನ್ಯಾಯಾಲಯ ಎಸಗಿರುವ ಗಂಭೀರ ಪ್ರಮಾದ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ,  ಚಿಕ್ಕಮಗಳೂರು ಜಿಲ್ಲಾ ಹೆಚ್ಚುವರಿ ಸೆಷನ್ಸ್ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯವು 2020ರ ಫೆ.1ರಂದು ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿ ನೀಡಿರುವ ತೀರ್ಪನ್ನು ರದ್ದುಪಡಿಸಿ, ಕಾನೂನು ಪ್ರಕಾರ ಹೊಸದಾಗಿ ಪ್ರಕರಣದ ಮರು ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

ಚಿಕ್ಕಮಗಳೂರು ತಾಲೂಕಿನ ಗ್ರಾಮವೊಂದರ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಸಂತ್ರಸ್ತೆಯ ಕುಟುಂಬ ಕೆಲಸ ಮಾಡುತ್ತಿತ್ತು. ತೋಟದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಸಂತೋಷ್ ಎಂಬ ಆರೋಪಿ ತಮ್ಮ ಅಪ್ರಾಪ್ತ ಪುತ್ರಿಯನ್ನು ವಿವಾಹವಾಗುವುದಾಗಿ ನಂಬಿಸಿ ಆಕೆಯೊಂದಿಗೆ ಒತ್ತಾಯಪೂರ್ವಕ ಸಂಭೋಗ ನಡೆಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಿ ಬಾಲಕಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಬಳಿಕ ಪೊಲೀಸರು ಸಂತೋಷನನ್ನು ಬಂಧಿಸಿದ್ದರು. ತನಿಖೆಯನ್ನು ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ತಂದೆ ದೂರಿನಲ್ಲಿ ಹೇಳಿದ್ದನ್ನೇ ಸಂತ್ರಸ್ತೆಯು ಪೊಲೀಸರ ಮುಂದೆಯೂ ಹೇಳಿಕೆ ನೀಡಿದ್ದಳು. ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಆಕೆಯು 32 ವಾರಗಳ ಗರ್ಭವತಿಯಾಗಿದ್ದಾಳೆ ಎಂದು ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ದೃಢಪಟ್ಟಿತ್ತು. ಆದರೆ, ಸಂತ್ರಸ್ತೆಯ ತಂದೆ ಹಾಗೂ ಕುಟುಂದವರು ಪ್ರತಿಕೂಲ ಸಾಕ್ಷ್ಯ ಹೇಳಿದ್ದನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ ಸಾಕ್ಷ್ಯಾಧಾರ ಕೊರತೆ ಕಾರಣ ನೀಡಿ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಈ ಆದೇಶವನ್ನು ಪ್ರಾಸಿಕ್ಯೂಷನ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

Ads on article

Advertise in articles 1

advertising articles 2

Advertise under the article