
25 ಲಕ್ಷ ರೂ. ಬಹುಮಾನ ಆಸೆಗೆ ಬಲಿಬಿದ್ದು 5,63,150 ಲಕ್ಷ ರೂ. ಕಳೆದುಕೊಂಡು ಪೆಚ್ಚಾದ ವ್ಯಕ್ತಿ!
10/30/2021 05:51:00 AM
ಉಡುಪಿ: ಆನ್ಲೈನ್ ನಲ್ಲಿ ಮೋಸ ಮಾಡುವ ಜಾಲವು ಜನರಿಗೆ ಏನೇನೋ ಆಮಿಷಗಳನ್ನೊಡ್ಡಿ ಜನರನ್ನು ವಂಚಿಸುತ್ತಲೇ ಇರುತ್ತದೆ. ಈ ಬಗ್ಗೆ ಸಾಕಷ್ಟು ವರದಿಗಳಾಗುತ್ತಿದ್ದರೂ, ಜನರು ಮೋಸ ಹೋಗುತ್ತಲೇ ಇರುತ್ತಾರೆ. ಇದೀಗ 25 ಲಕ್ಷ ರೂ. ಬಹುಮಾನದ ಆಸೆಗೆ ಬಲಿ ಬಿದ್ದು ವ್ಯಕ್ತಿಯೋರ್ವರು 5,63,150 ಲಕ್ಷ ರೂ. ಕಳೆದುಕೊಂಡ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿಯೋರ್ವರು
ದಿವಾಕರ್ ಎಂಬವರ ವಾಟ್ಸ್ಆ್ಯಪ್ ನಂಬರ್ ಗೆ ವಾಯ್ಸ್ ಮೆಸೇಜ್ ಕಳುಹಿಸಿ ತಮಗೆ 25 ಲಕ್ಷ ರೂ. ಬಹುಮಾನ ಬಂದಿರುವುದಾಗಿ ತಿಳಿಸಿದ್ದಾರೆ. ಬಹುಮಾನವನ್ನು ಪಡೆಯಲು ದಾಖಲಾತಿಗಳನ್ನು ವಾಟ್ಸ್ಆ್ಯಪ್ ಸಂಖ್ಯೆಗೆ ಕಳುಹಿಸಿಕೊಡುವಂತೆ ತಿಳಿಸಿದ್ದಾರೆ. ಈ ಮಾತನ್ನು ನಂಬಿದ ವಂಚನೆಗೊಳಗಾದ ದಿವಾಕರ್ ಅದೇ ರೀತಿ ಮಾಡಿದ್ದಾರೆ.
ಆ ಬಳಿಕ ಅಪರಿಚಿತ ವ್ಯಕ್ತಿಯೋರ್ವರು ಅವರ ಮೊಬೈಲ್ ಗೆ ಕರೆ ಮಾಡಿ, ವಿವಿಧ ಇಲಾಖೆಯ ಅಧಿಕಾರಿಗಳೆಂದು ನಂಬಿಸಿ ಬಹುಮಾನದ ಮೊತ್ತಕ್ಕೆ ಡೆಪಾಸಿಟ್ ಮೊತ್ತವನ್ನು ಪಾವತಿಸುವಂತೆ ತಿಳಿಸಿದ್ದಾರೆ.
ಆ ಬಳಿಕ ಎಸ್.ಬಿ.ಐ, ಐಡಿಬಿಐ ಬ್ಯಾಂಕ್ ಗಳ ಖಾತೆ ಸಂಖ್ಯೆಗಳನ್ನು ನೀಡಿದ್ದಾರೆ. ಇದನ್ನು ನಂಬಿದ ದಿವಾಕರ್ ಅವರು ಹಂತಹಂತವಾಗಿ 1.90 ಲಕ್ಷ ರೂ. ಹಾಗೂ 3,73,150 ರೂ. ಸೇರಿ ಒಟ್ಟು 5,63,150 ರೂ. ಹಣವನ್ನು ಡಿಪಾಸಿಟ್ ಮಾಡಿದ್ದಾರೆ.
ಆದರೆ ಆ ಬಳಿಕ ಬಹುಮಾನದ ಹಣವನ್ನು ನೀಡದೆ, ಡೆಪಾಸಿಟ್ ಮಾಡಿಸಿಕೊಂಡ ಹಣವನ್ನು ಕೂಡ ವಾಪಸ್ ನೀಡದೆ ಒಟ್ಟು 5,63,150 ರೂ. ಹಣ ವಂಚನೆ ಮಾಡಿರುವುದಾಗಿ ದಿವಾಕರ್ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.