ಕೊಯಮತ್ತೂರು: ಆರೋಗ್ಯ ಸರಿಯಿಲ್ಲವೆಂದು ಔಷಧಿ ಸೇವಿಸಿ ಮಲಗಿದ್ದ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ಶೋಷಣೆ ಮಾಡಿರುವ ಆರೋಪದ ಮೇಲೆ 26 ವರ್ಷದ ಭಾರತೀಯ ವಾಯುಪಡೆ(ಐಎಎಫ್) ವಿಮಾನದ ಲೆಫ್ಟಿನೆಂಟ್ನನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕೊಯಮತ್ತೂರಿನಲ್ಲಿದುವ ರೆಡ್ಫೀಲ್ಡ್ಸ್ನಲ್ಲಿರುವ ಏರ್ ಫೋರ್ಸ್ ಆಡಳಿತಾತ್ಮಕ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಯುವತಿಯೋರ್ವಳು ನೀಡಿರುವ ದೂರಿನ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
27 ವರ್ಷದ ಈ ಸಂತ್ರಸ್ತೆಗೆ ಎರಡು ವಾರಗಳ ಹಿಂದೆ ನಡೆಯುತ್ತಿದ್ದ ಕ್ರೀಡಾಭ್ಯಾಸದ ಸಂದರ್ಭ ಏಟು ಬಿದ್ದಿತ್ತು. ಈಕೆ ನೋವು ನಿವಾರಣೆಗೆ ಔಷಧಿ ಸೇವಿಸಿ ಕಾಲೇಜಿನ ಕೊಠಡಿಯಲ್ಲಿ ಮಲಗಿದ್ದಳು. ಆದರೆ ಆ ಬಳಿಕ ಎದ್ದು ನೋಡಿದಾಗ ಲೈಂಗಿಕ ಶೋಷಣೆಯಾಗಿರುವುದು ಆಕೆಗೆ ತಿಳಿದುಬಂದಿದೆ.
ತಕ್ಷಣ ಆಕೆ ಈ ಬಗ್ಗೆ ದೂರು ನೀಡಿದ್ದಾಳೆ. ಆದರೆ ಐಎಎಫ್ ತೆಗೆದುಕೊಂಡ ಕ್ರಮದ ಬಗ್ಗೆ ಆಕೆ ತೃಪ್ತಿಯಿಲ್ಲದ್ದರಿಂದ ಪೊಲೀಸರಿಗೆ ದೂರು ನೀಡಿದ್ದಾಳೆ. ಕೊಯಮತ್ತೂರಿನ ಗಾಂಧಿಪುರಂ ಪೊಲೀಸ್ ಠಾಣೆಯ ಮಹಿಳಾ ತಂಡವು ಆರಂಭಿಕ ತನಿಖೆ ನಡೆಸಿದೆ. ಬಳಿಕ ಛತ್ತೀಸಗಡ ಮೂಲದ ಈ ಐಎಎಫ್ ಅಧಿಕಾರಿಯ ಮೇಲೆ ಪ್ರಕರಣ ದಾಖಲಿಸಿದೆ. ಆರೋಪಿಯು ಜಿಲ್ಲಾ ನ್ಯಾಯಾಧೀಶರ ಮುಂದೆ ಶರಣಾಗಿದ್ದು, ಈ ಸಂದರ್ಭದಲ್ಲಿ ಆತನನ್ನು ಬಂಧಿಸಿಲಾಗಿದೆ. ಸದ್ಯ ಉದುಮಲಪೇಟ್ ಜೈಲಿನಲ್ಲಿ ಇರಿಸಲಾಗಿದೆ ಎಂದು ವರದಿ ತಿಳಿಸಿದೆ.
ಆರೋಪಿ ಐಎಎಫ್ ಅಧಿಕಾರಿಯಾದ್ದರಿಂದ ಸೇನಾ ನ್ಯಾಯಾಲಯಕ್ಕೆ ಮಾತ್ರ ವಿಚಾರಣೆ ನಡೆಸುವ ಅಧಿಕಾರವಿರುತ್ತದೆ. ಆದ್ದರಿಂದ ಪೊಲೀಸರು ಈ ದೂರಿನ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರವಿರುವುದಿಲ್ಲ ಎಂದು ಆರೋಪಿಯ ವಕೀಲರು ವಾದಿಸುತ್ತಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.