ಶುಕ್ರವಾರದಿಂದ ಶಾಲೆಗಳ ಆರಂಭ: ಜಿಲ್ಲಾಧಿಕಾರಿ ನಿರ್ಧಾರಕ್ಕೆ ಖಾಸಗಿ ಶಾಲಾಡಳಿತ ಒಕ್ಕೂಟ ಸ್ವಾಗತ
ದಕ್ಷಿಣ ಕನ್ನಡದಲ್ಲಿ ಶುಕ್ರವಾರದಿಂದ ಹೈಸ್ಕೂಲ್ ಶಾಲೆಗಳು ಎಂದಿನ ಸಹಜ ಶೈಕ್ಷಣಿಕ ಚಟುವಟಿಕೆ ನಡೆಸಲಿವೆ.
ಶುಕ್ರವಾರದಿಂದ 8 ರಿಂದ 10 ನೇ ತರಗತಿಗಳನ್ನು ಆರಂಭಿಸಲು ಜಿಲ್ಲಾಡಳಿತ ಹಸಿರು ನಿಶಾನೆ ನೀಡಿದ್ದು, ಅದರಂತೆ ಶಾಲೆಗಳ ಆರಂಭ ಮಾಡಲಾಗುವುದು ಎಂದು ಖಾಸಗಿ ಶಾಲಾಡಳಿತ ಒಕ್ಕೂಟದ ಉಪಾಧ್ಯಕ್ಷ ಮಂಜುನಾಥ ರೇವಣಕರ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಜೊತೆಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿ ನಡೆಸಿದ ಸಭೆಯ ವಿವರ ನೀಡಿದ ಅವರು, ಆರನೇ ಮತ್ತು ಏಳನೇ ತರಗತಿಗಳು ಸೋಮವಾರದಿಂದ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಆದರೆ, ಒಂದರಿಂದ ಐದನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮಾತ್ರ ಸದ್ಯಕ್ಕೆ ಆನ್‌ಲೈನ್ ಯಾ ಆಫ್‌ಲೈನ್ ಶಿಕ್ಷಣ ಮುಂದುವರಿಯಲಿದೆ. ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು, ಜಿಲ್ಲಾಡಳಿತದ ನಿರ್ಧಾರವನ್ನು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸ್ವಾಗತಿಸಿದೆ ಎಂದು ತಿಳಿಸಿದ್ದಾರೆ.
