-->

Kannadiga IAS officer shine in Para Olympics- ಪ್ಯಾರಾ ಒಲಿಂಪಿಕ್ಸ್‌: ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್

Kannadiga IAS officer shine in Para Olympics- ಪ್ಯಾರಾ ಒಲಿಂಪಿಕ್ಸ್‌: ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್



ಉತ್ತರ ಪ್ರದೇಶದ ನೋಯ್ಡಾ ಜಿಲ್ಲಾಧಿಕಾರಿಯಾಗಿರುವ ಸುಹಾಸ್ ಎಲ್ ವೈ (ಸುಹಾಸ್ ಲಾಳನಕೆರೆ ಯತಿರಾಜು) ಟೋಕಿಯೋದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.


ವಿಶ್ವ ನ್ಯಾಡ್ಮಿಂಟನ್ ಅಗ್ರ ಶ್ರೇಯಾಂಕದ ಆಟಗಾರ ಫ್ರಾನ್ಸ್ ದೇಶದ ಲೂಕಾಸ್ ಮಾಝರ್ ಎದುರು ಸುಹಾಸ್ ಸೆಣಸಿದರು. ಸುಹಾಸ್ ವಿಶ್ವದ 3ನೇ ಶ್ರೇಯಾಂಕದ ಆಟಗಾರರಾಗಿದ್ದಾರೆ. ಇವರು ಹಾಸನ ಜಿಲ್ಲೆಯವರೆಂಬುದು ಮತ್ತು ಅಪ್ಪಟ ಕನ್ನಡಿಗ ಎಂಬುದು ಹೆಮ್ಮೆಯ ಸಂಗತಿ.


ಹಾಸನ ನಗರದ ಜಯಶ್ರೀ ಮತ್ತು ಮಂಡ್ಯ ಮೂಲದ ದಿವಂಗತ ಯತಿರಾಜ್ ದಂಪತಿಗಳ ಪುತ್ರನಾಗಿರುವ ಸುಹಾಸ್ ಹುಟ್ಟಿದ್ದು ಹಾಸನದಲ್ಲಿ(2 ಜುಲೈ 1983). ಮಂಡ್ಯದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಅವರು, ತಂದೆ ಸರ್ಕಾರಿ ನೌಕರರಾಗಿದ್ದುದರಿಂದ ಬೇರೆ ಬೇರೆ ಊರುಗಳಲ್ಲಿ ಹೈಸ್ಕೂಲು, ಕಾಲೇಜು ಶಿಕ್ಷಣ ಮುಗಿಸಿದರು.





ಸುರತ್ಕಲ್ ನ NITK ತಾಂತ್ರಿಕ ವಿದ್ಯಾ ಸಂಸ್ಥೆಯಲ್ಲಿ ಮೊದಲ ರ್ಯಾಂಕ್ ನೊಂದಿಗೆ ಪದವಿ ಪಡೆದಿದ್ದಾರೆ. ನಂತರ ಸಿವಿಲ್ ಸೇವೆಗಳ ಪರೀಕ್ಷೆ ಎದುರಿಸಿ 2007ರ ಸಿವಿಲ್ ಸರ್ವಿಸ್ ಬ್ಯಾಚ್‌ನಲ್ಲಿ ಉತ್ತರ ಪ್ರದೇಶ ಕೇಡರ್ ನಲ್ಲಿ IASಗೆ ಆಯ್ಕೆಯಾದರು.


ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರರಾಗಿರುವ ಸುಹಾಸ್, 2007ರ ಬ್ಯಾಚ್ ನ ಉತ್ತರ ಪ್ರದೇಶ ಕೇಡರ್ ಅಧಿಕಾರಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಐಎಎಸ್ ಅಧಿಕಾರಿಯೊಬ್ಬರು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತಿದ್ದಾರೆ. ಸುಹಾಸ್ ವಿಶ್ವದ ನಂ.3 ಶ್ರೇಯಾಂಕದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರಾಗಿದ್ದಾರೆ. 2018ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ಗಳಿಸಿದ್ದರು. 2017ರಲ್ಲಿ ಟರ್ಕಿ ದೇಶದಲ್ಲಿ ಜರುಗಿದ ಮೆನ್ಸ್ ಸಿಂಗಲ್ಸ್ ಮತ್ತು ಡಬಲ್ಸ್ ಬಿಡಬ್ಲ್ಯೂ ಎಫ್ ಟರ್ಕಿಶ್ ಓಪನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗಳಿಸಿದ್ದರು. ಚೀನಾದ ಬೀಜಿಂಗ್ ನಲ್ಲಿ 2016ರ ಏಷ್ಯಾ ಚಾಂಪಿಯನ್ ಶಿಪ್ ನಲ್ಲಿಯೂ ಚಿನ್ನದ ಪದಕಗಳಿಸಿದ್ದರು.


ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರಾಗಿರುವ ಸುಹಾಸ್ ಆಡಳಿತ ನಿರ್ವಹಣೆಯಲ್ಲಿಯೂ ಉತ್ತಮ ಕಾರ್ಯ ಕ್ಷಮತೆಗೆ ಹೆಸರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಕೋವಿಡ್ ಮೊದಲ ಅಲೆಯ ಸಂದರ್ಭ ಗೌತಮ್ ಬುದ್ದ ನಗರದಲ್ಲಿ ಕೋವಿಡ್ ಸೋಂಕಿನ ಪ್ರಕರಣ ಉಲ್ಭಣಿಸಿದ್ದಾಗ, ಪರಿಸ್ಥಿತಿ ನಿಭಾಯಿಸುವಲ್ಲಿ ವಿಪಲರಾಗಿದ್ದ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಬಿ ಎನ್ ಸಿಂಗ್ ಅವರನ್ನು ತೆರವುಗೊಳಿಸಿ, ಸುಹಾಸ್ ಅವರನ್ನು ಡಿಎಂ ಆಗಿ ನೇಮಿಸಲಾಗಿತ್ತು. ಅವರು ಕೋವಿಡ್ ನಿರ್ವಹಣೆಯಲ್ಲಿ ಗಮನ ಸೆಳೆಯುವಂತೆ ಕರ್ತವ್ಯ ನಿರ್ವಹಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.


2019-20ರಲ್ಲಿ ನಡೆದ ಸುಹಾಸ್ ಅವರು ಭಾಗವಹಿಸಿದ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಮೂರು ಚಿನ್ನ, 2 ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಮೆನ್ಸ್ ಸಿಂಗಲ್ಸ್ ನಲ್ಲಿ ಮೂರನೇ ರ್ಯಾಂಕ್ ಗಳಿಸಿದ ಅವರ ಸಾಧನೆಯ ಆಧಾರದ ಮೇಲೆ ಅವರನ್ನು ಪ್ಯಾರಾಲಿಂಪಿಕ್ಸ್ ಗೆ ಆಯ್ಕೆ ಮಾಡಲಾಗಿದೆ. “ದೇಶವನ್ನು ಪ್ರತಿನಿಧಿಸುವುದು ಗೌರವದ ವಿಷಯ ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವುದು, ನನ್ನ ಕನಸು ನನಸಾಗಿದೆ ಎಂದಿದ್ದಾರೆ. ತಮ್ಮ ಕರ್ತವ್ಯದ ಜೊತೆಯಲ್ಲಿಯೇ ಕ್ರೀಡಾಕೂಟದಲ್ಲಿ ಭಾಗವಹಿಸಲು ನಿತ್ಯ ಅಭ್ಯಾಸದಲ್ಲಿ ತೊಡಗಿದ್ದಾರಂತೆ. ಒಂದು ವಾರದ ಅವಧಿಗೆ ಮಾತ್ರ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ತೆರಳಲಿದ್ದು, ಅದು ತಮ್ಮ ಆಡಳಿತಾತ್ಮಕ ಕರ್ತವ್ಯಗಳಿಗೆ ಹೆಚ್ಚು ಅಡ್ಡಿ ಉಂಟು ಮಾಡುವುದಿಲ್ಲ ಎಂದಿದ್ದಾರೆ.


ಹಿರಿಯ ಐಎಎಸ್ ಅಧಿಕಾರಿ ಆಗಿರುವ ಸುಹಾಸ್ ಎಲ್ ವೈ ಆಡಳಿತದಲ್ಲಿಯೂ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಪ್ರಧಾನ ಮಂತ್ರಿ ಜನಧನ್ ಅನುಷ್ಠಾನಕ್ಕಾಗಿ ಪ್ರಧಾನ ಮಂತ್ರಿ ಪುರಸ್ಕಾರಕ್ಕೆ ಸುಹಾಸ್ ಸೂಚಿತವಾಗಿತ್ತು. ಮಕ್ಕಳು ಮತ್ತು ಗರ್ಭಿಣಿಯರಿಗೆ ನೆರವಾಗಲು ‘ಕುಪೋಷಣ್ ಕಾ ದರ್ಪಣ್ ಮತ್ತು ಪ್ರೆಗ್ನೆನ್ಸಿ ಕಾ ದರ್ಪಣ್ ಎಂಬ ಎರಡು ಮೊಬೈಲ್ ಅಪ್ಲಿಕೇಶನ್ ಗಳನ್ನು ಅಭವೃದ್ದಿ ಪಡಿಸಿದ್ದಾರೆ. ಸಾರ್ವತ್ರಿಕ ಚುನಾವಣೆಗಳಲ್ಲಿ ವಿಶೇಷ ಚೇತನರು ಮತ ಚಲಾಯಿಸಲು ಅನುಕೂಲವಾಗುವಂತಹ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿ ಪಡಿಸಿದ್ದಾರೆ. ಇವರ ಆಡಳಿತ ಸೇವೆಯ ಸಾಧನೆಯನ್ನು ಗುರುತಿಸಿ ಕಂದಾಯ ಇಲಾಖೆ ಪುರಸ್ಕಾರ ನೀಡಿದೆ.ಚುನಾವಣೆ ಸಂದರ್ಭದ ಕಾರ್ಯ ಕ್ಷಮತೆಗಾಗಿ ಉತ್ತರ ಪ್ರದೇಶದ ರಾಜ್ಯಪಾಲರು ಪುರಸ್ಕರಿಸಿ, ಗೌರವಿಸಿದ್ದಾರೆ. ಉತ್ತರ ಪ್ರದೇಶದ ‘ಯಶ್ ಭಾರ್ತಿ’ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸುಹಾಸ್ ಅವರಿಗೆ ರಾಜ್ಯ ಸರ್ಕಾರ ನೀಡಿ ಗೌರವಿಸಿದೆ.

|ಅರಕಲಗೂಡು ಜಯಕುಮಾರ್

Ads on article

Advertise in articles 1

advertising articles 2

Advertise under the article