ಅನ್ಯಕೋಮಿನ ಪುರುಷರೊಂದಿಗೆ ಲಾಡ್ಜ್ ನಲ್ಲಿದ್ದ ಮಹಿಳೆ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ದಾಳಿ


ಪುತ್ತೂರು: ಅನ್ಯಕೋಮಿನವರೊಂದಿಗೆ ಮಹಿಳೆಯೋರ್ವರು ಲಾಡ್ಜ್​ನಲ್ಲಿ ತಂಗಿದ್ದಾರೆಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರ ಮೇಲೆ ಹಲ್ಲೆ ಎಸಗಿರುವ ಘಟನೆ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಲಾಡ್ಜ್​ನಲ್ಲಿ ನಡೆದಿದೆ. ಈ ಬಗ್ಗೆ ಮಹಿಳೆಯು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಮೇಲೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು ಮೂಲದ ಮಹಿಳೆಯು 
ಈ ಲಾಡ್ಜ್ ನಲ್ಲಿ ಎರಡು ದಿನಗಳಿಂದ ತಂಗಿದ್ದರು. ಸೆ.17 ರಂದು ಬೆಂಗಳೂರಿನಿಂದ ಪುತ್ತೂರಿಗೆ ಬಂದಿರುವ ಮಹಿಳೆ, ಸೆ.18 ರಂದು ಲಾಡ್ಜ್​ನಲ್ಲಿ ತಂಗಿದ್ದರು. ಈಕೆ ಪುತ್ತೂರು ನಗರ ಪೊಲೀಸರ ವಶದಲ್ಲಿದ್ದ ತನ್ನ ಕಾರನ್ನು ಬಿಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಪುತ್ತೂರಿಗೆ ಬಂದಿದ್ದರು ಎನ್ನಲಾಗಿದೆ. ಈ ಸಂದರ್ಭ ಆಕೆಯ ಜೊತೆ ಕಾರ್ಯ ನಿರ್ವಹಿಸುತ್ತಿರುವ ಉಳ್ಳಾಲ ಮತ್ತು ಬೆಂಗಳೂರಿನ ಕೊಟ್ಟಿಗೇರಿ ನಿವಾಸಿಗಳಿಬ್ಬರೂ ಆಗಮಿಸಿದ್ದರು. 

ಮಹಿಳೆಯು ಅನ್ಯಕೋಮಿನ ಪುರುಷರೊಂದಿಗೆ ಲಾಡ್ಜ್​ನಲ್ಲಿ ತಂಗಿದ್ದರು ಎನ್ನುವ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸೆ.20ರ ತಡರಾತ್ರಿ ಲಾಡ್ಜ್​ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆಂದು ಮಹಿಳೆ ದೂರಿನಲ್ಲಿ‌ ತಿಳಿಸಿದ್ದಾರೆ.

ತಡರಾತ್ರಿ ಸುಮಾರು 10 ರಿಂದ 15 ಜನರಿದ್ದ ಗುಂಪೊಂದು ಲಾಡ್ಜ್ ಮುಂಭಾಗ ಜಮಾಯಿಸಿದೆ. ಇದರಲ್ಲಿ ನಾಲ್ಕೈದು ಜನ ಹಿಂದೂ ಕಾರ್ಯಕರ್ತರು ಲಾಡ್ಜ್​ಗೆ ನುಗ್ಗಿ ಮಹಿಳೆ ಹಾಗೂ ಆಕೆಯ ಸಹೋದ್ಯೋಗಿಗಳಿದ್ದ ಕೊಠಡಿಗೆ ನುಗ್ಗಿದ್ದಾರೆ. ಈ ವೇಳೆ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ‌. 

ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆ ಹಾಗೂ ಆಕೆಯ ಜೊತೆಗಿದ್ದ ಪುರುಷರನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಹಲ್ಲೆ ಮಾಡಿದವರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ಹಾಗೂ ಇತರೆಡೆಗಳಲ್ಲಿರುವ ಲಾಡ್ಜ್​ಗಳಲ್ಲಿ ತಂಗಲು ಬರುವವರ ವಿಳಾಸ ಹಾಗೂ ಗುರುತು ಚೀಟಿಯ ಪರಿಶೀಲನೆ ಸರಿಯಾಗಿ ನಡೆಸಲಾಗುತ್ತಿಲ್ಲ. ಇದರಲ್ಲಿ ಬಹಳಷ್ಟು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಪರಿಣಾಮ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯುಂಟಾಗುತ್ತಿದೆ. ಆದ್ದರಿಂದ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.