-->

Hindu Mahasabha on Savarkar Controversy | ಸಾರ್ವರ್ಕರ್ ವಿವಾದ-SDPI ಮತ್ತು BJP ಮಧ್ಯೆ ಒಳ ಒಪ್ಪಂದ: ಹಿಂದೂ ಮಹಾಸಭಾ ಆರೋಪ

Hindu Mahasabha on Savarkar Controversy | ಸಾರ್ವರ್ಕರ್ ವಿವಾದ-SDPI ಮತ್ತು BJP ಮಧ್ಯೆ ಒಳ ಒಪ್ಪಂದ: ಹಿಂದೂ ಮಹಾಸಭಾ ಆರೋಪ

ಮಂಗಳೂರು: ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಲಾಗಿದೆ ಎಂದು ಎಸ್ ಡಿಪಿಐ ಹಾಗೂ ಪಿಎಫ್ ಐ ವಿರುದ್ಧ ಬಿಜೆಪಿ ಒಂದೆಡೆ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಹಿಂದೂ ಮಹಾಸಭಾ ಬಿಜೆಪಿ ಹಾಗೂ ಎಸ್ ಡಿಪಿಐ ಎರಡೂ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.



ಈ ಬಗ್ಗೆ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪುತ್ರನ್, ಬಿಜೆಪಿ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ಈ ಪ್ರತಿಭಟನೆಗಳನ್ನು ನಡೆಸುತ್ತಿದೆ. ಸಾರ್ವರ್ಕರ್ ಮೇಲಿನ ಪ್ರೀತಿಯಿಂದಲ್ಲ ಎಂದು ಹೇಳಿದ್ದಾರೆ.



ಈ ಸಮಸ್ಯೆಗಳನ್ನೆಲ್ಲ ಆರಂಭಿಸಿದ್ದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ(ಎಸ್ ಡಿಪಿಐ). ಆದರೆ ಈ ಎಸ್ ಡಿಪಿಐ ಪ್ರಾರಂಭ ಎಲ್ಲಿಂದಾಗಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಎಸ್ ಡಿಪಿಐ ಪಕ್ಷದ ಜೊತೆಗೆ ಅಧಿಕಾರವನ್ನು ಹಂಚಿಕೊಂಡಿರುವ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಸಾರ್ವರ್ಕರ್ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದೆ ಎಂದರೆ, ಇದಕ್ಕೆ ನಗಬೇಕೋ ಅಳಬೇಕೋ ಎನ್ನುವುದು ತಿಳಿಯುತಿಲ್ಲ ಎಂದು ಅವರು ಹೇಳಿದರು.





ಹಿಂದೂ ಮಹಾಸಭಾವನ್ನುವ ವ್ಯವಸ್ಥಿತವಾಗಿ ಮುಗಿಸಲು ನಮ್ಮ ನಾಯಕರು(ಸಾರ್ವರ್ಕರ್) ಹೆಸರನ್ನು ಬಳಸುವುದನ್ನು ನಾವು ಖಂಡಿಸುತ್ತೇವೆ. ಸಾರ್ವರ್ಕರ್ ಅವರು ಹಿಂದೂ ಮಹಾಸಭಾದ ನಾಯಕರು. ನಿಮಗೆ ಹಿಂದೂ ಮಹಾಸಭಾ ಬೇಡವಾದರೆ, ಸಾರ್ವರ್ಕರ್ ಯಾಕೆ ಬೇಕು? ರಾಜೇಶ್ ಪುತ್ರನ್ ಪ್ರಶ್ನಿಸಿದರು.


ನೀವು ಗೋಡ್ಸೆ ವಿಚಾರವನ್ನು ಒಪ್ಪಿಕೊಳ್ಳುತ್ತಿಲ್ಲ, ಹಾಗಿದ್ದರೆ ಸಾರ್ವರ್ಕರ್ ವಿಚಾರವನ್ನು ಹೇಗೆ ಒಪ್ಪಿಕೊಳ್ಳುತ್ತೀರಿ? ಮೊನ್ನೆ ಸಿದ್ದರಾಮಯ್ಯನವರು ಮಾತನಾಡುತ್ತಾ, ನಮ್ಮಲ್ಲಿ ಗಾಂಧಿ ಇದ್ದಾರೆ, ನಿಮ್ಮಲ್ಲಿ ಯಾರಿದ್ದಾರೆ ಎಂದು ಪ್ರಶ್ನಿಸಿದರು. ಈ ವೇಳೆ ಭಾರತೀಯ ಜನತಾ ಪಾರ್ಟಿ ಹಿಂದೂ ಮಹಾಸಭಾದಿಂದ ಹುಟ್ಟಿರುವಂತಹದ್ದು ಎಂದು ಧೈರ್ಯದಿಂದ ಹೇಳಲು ನಿಮಗೆ ನಾಚಿಕೆಯಾಗುತ್ತಿದ್ದರೆ, ಹಿಂದೂ ಮಹಾಸಭಾದ ನಾಯಕರ ಹೆಸರು ನಿಮಗೆ ಯಾಕೆ ಬೇಕು? ಸಾರ್ವರ್ಕರ್ ಅವರು ಹಿಂದೂ ಮಹಾಸಭಾದವರು. ಹಿಂದೂ ಮಹಾಸಭಾದಿಂದ ಜನಸಂಘ ಹುಟ್ಟಿರುವಂತಹದ್ದು. ಆದರೆ ಜನಸಂಘವನ್ನು ಅವರು ತಿರಸ್ಕಾರ ಮಾಡಿದ್ದಂತಹದ್ದು. ಯಾಕೆಂದರೆ, ಹಿಂದೂ ಮಹಾಸಭಾ ಹಿಂದೂ ರಾಜಕೀಯ ಪಕ್ಷ, ಜನಸಂಘ ಜಾತ್ಯಾತೀತ ಪಕ್ಷವಾಗಿದೆ. ಈ ದೇಶದಲ್ಲಿ ಎರಡು ಜಾತ್ಯತೀತ ಪಕ್ಷದ ಅವಶ್ಯಕತೆ ಏನು ಎಂದು ಸಾರ್ವರ್ಕರ್ ಅಂದಿನ ದಿನ ಕೇಳಿದ್ದರು ಎಂದು ಅವರು ಹೇಳಿದರು.



ನಿಮ್ಮ ಪಕ್ಷದಲ್ಲಿ ಮುಸಲ್ಮಾನರಿಲ್ಲವೇ? ಅವರಿಗೆ ಬೇಕಾದ ಪ್ರಕೋಷ್ಠಗಳು, ಅದೂ ಇದು ಎಲ್ಲ ಮಾಡಿಯೂ, ನಾವು ಹಿಂದೂಗಳ ಪರವಾಗಿ ಎಂದು ಮಾತನಾಡುತ್ತಿದ್ದೀರಿ. ಎಂದು ರಾಜೇಶ್, ನೀವು ಅಧಿಕಾರದಲ್ಲಿದ್ದಾಗ ಎಸ್ ಡಿಪಿಐಯನ್ನು ಬ್ಯಾನ್ ಮಾಡಬೇಕು ಎಂದು ಹೇಳಿದಿರಿ. ಈಗ ಕೇಂದ್ರದಲ್ಲಿ ಪೂರ್ಣ ಬಹುಮತದ ಸರ್ಕಾರ ನಿಮ್ಮದಿದೆ. ರಾಜ್ಯದಲ್ಲಿಯೂ ನಿಮ್ಮ ಸರ್ಕಾರ ಇದೆ. ನಿಮ್ಮ ಈ ನಕಲಿ ಹಿಂದುತ್ವ, ಡೋಂಗಿ ರಾಜಕಾರಣವನ್ನು ಜನರು ಗಮನಿಸುತ್ತಿಲ್ಲ ಎಂದು ಅಂದುಕೊಂಡಿದ್ದೀರಾ? ಎಂದು ಅವರು ಪ್ರಶ್ನಿಸಿದರು.


ಭಾರತೀಯ ಜನತಾ ಪಾರ್ಟಿಯನ್ನು ಕರ್ನಾಟಕದಲ್ಲಿ ಕಟ್ಟಿದಂತಹ ಯಡಿಯೂರಪ್ಪನವರು ಪಕ್ಷ ಬಿಟ್ಟು ಹೋಗಿದ್ದಾರೆ. ಅವರು ಕಷ್ಟಪಟ್ಟು ಪಕ್ಷ ಕಟ್ಟಿದರು. ಕಾರ್ಯಕರ್ತರನ್ನು ಒಟ್ಟು ಮಾಡಿದರು. ಪಕ್ಷವನ್ನು ಅಧಿಕಾರಕ್ಕೆ ತಂದರು. ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ಇವತ್ತು ಈ ಕ್ಷಣದಲ್ಲಿ ಚುನಾವಣೆ ನಡೆದರೂ ರಾಜ್ಯದಲ್ಲಿ 10 ಸೀಟು ಗೆಲ್ಲುವ ಯೋಗ್ಯತೆ ಭಾರತೀಯ ಜನತಾ ಪಾರ್ಟಿಗೆ ಇಲ್ಲ ಎಂದು ಅವರು ಹೇಳಿದರು.



ಮುಂದಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಷಡ್ಯಂತ್ರ ಇದು. ಮೊನ್ನೆ ನಡೆದ ಗಲಭೆ ಎಸ್ ಡಿಪಿಐ ಹಾಗೂ ಬಿಜೆಪಿಯ ಒಳ ಒಪ್ಪಂದದ ಒಂದು ಕಾರ್ಯಕ್ರಮ ಎಂದು ಅವರು ಆರೋಪಿಸಿದರು. ಜಾತ್ಯತೀತ ಪಕ್ಷವಾಗಿರುವ ಬಿಜೆಪಿ ಹಿಂದುತ್ವದ ವಿಚಾರ ಯಾಕೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

Ads on article

Advertise in articles 1

advertising articles 2

Advertise under the article