ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬೃಹತ್ ಪ್ರಮಾಣದ ಚಿನ್ನದ ಅಕ್ರಮ ಸಾಗಾಟವನ್ನು ಪತ್ತೆ ಹಚ್ಚಿದ್ದಾರೆ.
ಮಕ್ಕಳ ಹೇರ್ ಬ್ಯಾಂಡಿನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಯತ್ನಿಸುತ್ತಿದ್ದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
115 ಗ್ರಾಮ್ ತೂಕದ ಚಿನ್ನದ ಕಡ್ಡಿಗಳನ್ನು ಮಕ್ಕಳ ತಲೆ ಕೂದಲಿಗೆ ಬಳಸುವ ಹೇರ್ ಬ್ಯಾಂಡಿನಲ್ಲಿ ಅಕ್ರಮವಾಗಿ ಇಟ್ಟು ಸಾಗಾಟ ಮಾಡಲಾಗುತ್ತಿತ್ತು. ಸುಮಾರು 5.60 ಲಕ್ಷ ರೂ. ಮೌಲ್ಯದ ಚಿನ್ನ ಇದಾಗಿದ್ದು, ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೂಲಕ ಬಂದಿಳಿದ ಪ್ರಯಾಣಿಕರು ಮುರ್ಡೇಶ್ವರಕ್ಕೆ ತೆರಳುವ ಮುನ್ನ ಕಸ್ಟಮ್ಸ್ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿ ಅರೋಪಿಯನ್ನು ಬಂಧಿಸಿದ್ದಾರೆ.
ಇನ್ನೊಂದು ಪ್ರಕರಣವೊಂದರಲ್ಲಿ ಮಿಕ್ಸರ್ ಗ್ರೈಂಡರ್‌ನಲ್ಲಿ 350 ಗ್ರಾಂ ತೂಕದ ಚಿನ್ನ ಇಟ್ಟು ಅಕ್ರಮ ಸಾಗಾಟ ಮಾಢುತ್ತಿದ್ದ ಪ್ರಕರಣವೂ ಬಯಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಕಾಸರಗೋಡು ಮೂಲದ ವ್ಯಕ್ತಿಯಾಗಿದ್ದು, ಆರೋಪಿಯಿಂದ ಸುಮಾರು 17 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.