-->

Dr John Fernandes- ಮಂಗಳೂರು: ಜಾತ್ಯತೀತ ಮೌಲ್ಯಗಳ ಹರಿಕಾರ ಡಾ. ಜಾನ್ ಫೆರ್ನಾಂಡೀಸ್ ನಿಧನ; ಜಮಾಅತೆ ಇಸ್ಲಾಮೀ ಹಿಂದ್ ಸಂತಾಪ

Dr John Fernandes- ಮಂಗಳೂರು: ಜಾತ್ಯತೀತ ಮೌಲ್ಯಗಳ ಹರಿಕಾರ ಡಾ. ಜಾನ್ ಫೆರ್ನಾಂಡೀಸ್ ನಿಧನ; ಜಮಾಅತೆ ಇಸ್ಲಾಮೀ ಹಿಂದ್ ಸಂತಾಪ




ಮಂಗಳೂರು: ಅಂತರ್ಧಮೀಯ ಸಂವಾದದ ಹರಿಕಾರ ಡಾ. ಜಾನ್ ಫೆರ್ನಾಂಡೀಸ್ ನಿಧನ; ಜಮಾಅತೆ ಇಸ್ಲಾಮೀ ಹಿಂದ್ ಸಂತಾಪ


ಮಂಗಳೂರು: ಧರ್ಮ ಸಮನ್ವಯ ಹಾಗೂ ಅಂತರ್ಧರ್ಮೀಯ ಸಂವಾದದ ಹರಿಕಾರ ಡಾ. ಜಾನ್ ಫೆರ್ನಾಂಡಿಸ್ ಅಲ್ಪಕಾಲದ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.


1936ರಲ್ಲಿ ಉದ್ಯಾವರದಲ್ಲಿ ಜನಿಸಿದ ಇವರು, 1963ರಲ್ಲಿ ಧರ್ಮಗುರುಗಳಾಗಿ ದೀಕ್ಷೆ ಪಡೆದರು. ಬಿಜೈ ಮತ್ತು ರೊಸಾರಿಯೊ ಧರ್ಮ ಕೇಂದ್ರಗಳಲ್ಲಿ ಸಹಾಯಕ ಗುರುಗಳಾಗಿ ಹಾಗೂ ಹೊಸಬೆಟ್ಟು (ಮೂಡುಬಿದಿರೆ), ಕಟಪಾಡಿ ಹಾಗೂ ಬೆಳ್ಮಣ್ ಚರ್ಚ್‌ಗಳಲ್ಲಿ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.


ಜರ್ಮನಿಯ ಇನ್ಸ್‌ಬ್ರುಕ್ ಮತ್ತು ಟಿಯರ್‌ನಲ್ಲಿ ಉನ್ನತ ಶಿಕ್ಷಣದೊಂದಿಗೆ ಡಾಕ್ಟರೇಟ್ ಪದವಿ ಪಡೆದಿದ್ದ ಇವರು, ಮಂಗಳೂರು ಧರ್ಮಪ್ರಾಂತ್ಯದ ಮಂಗಳ ಜ್ಯೋತಿ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಹಾಗೂ ಜೆಪ್ಪುವಿನಲ್ಲಿರುವ ಸಂತ ಜೋಸೆಫ್‌ರ ಗುರುಕುಲದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ, ಸುಮಾರು 10 ವರ್ಷಗಳ ಕಾಲ ಮಂಗಳೂರು ವಿಶ್ವವಿದ್ಯಾಲಯದ ಕ್ರೈಸ್ತ ವಿದ್ಯಾಪೀಠದ ಮುಖ್ಯಸ್ಥರೂ, ಜೊತೆಗೆ ಹಾಗೂ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದಾರೆ.


ಧರ್ಮ ಧರ್ಮದ ನಡುವೆ ಸೌಹಾರ್ದ ಬೆಸೆಯುವ ನಿಟ್ಟಿನಲ್ಲಿ ಡಾ. ಜಾನ್ ಅಂತರ್ ಧರ್ಮೀಯ ಸಂವಾದವನ್ನು ನಡೆಸುವಲ್ಲಿ ಬಹಳಷ್ಟು ಶ್ರಮಿಸಿದ್ದರು. ಅನ್ಯ ಧರ್ಮದ ಮುಖಂಡರನ್ನು ಒಗ್ಗೂಡಿಸಿ ಜಾತ್ಯತೀತೆಯ ಆಧಾರದಲ್ಲಿ ಸರ್ವರು ಸಹಬಾಳ್ವೆ ನಡೆಸಲು ಹಾಗೂ ಇತರ ಧರ್ಮಗಳನ್ನು ಗೌರವಿಸಿ ಬದುಕಲು ಪ್ರೇರೇಪಿಸಿದರು. ಈ ಬಗ್ಗೆ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.


ಮೃತರ ಅಂತ್ಯಕ್ರಿಯೆ ನಗರದ ವಾಮಂಜೂರು ಚರ್ಚ್‌ನಲ್ಲಿ ಜು. 4ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.



ಜಮಾಅತೆ ಇಸ್ಲಾಮೀ ಹಿಂದ್ ಸಂತಾಪ:


ಸೌಹಾರ್ದತೆಯ ಹರಿಕಾರ ಫಾ.‌ ಜಾನ್ ಫೆರ್ನಾಂಡಿಸ್ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯದ ಸಂತಾಪ ಸೂಚಿಸಿದೆ.ವಿವಿಧ ಧರ್ಮಗಳ ಮಧ್ಯೆ ಸೌಹಾರ್ದತೆಯ ಕೊಂಡಿಯಾಗಿ ಧಾರ್ಮಿಕ ಸಾಮರಸ್ಯಕ್ಕಾಗಿ ಅಹರ್ನಿಶಿ ದುಡಿದ ಫಾ. ಜಾನ್ ಫೆರ್ನಾಂಡಿಸ್ ರವರ ರ ನಿಧನ ಸೌಹಾರ್ದ ಪರಂಪರೆಗೆ ತುಂಬಲಾರದ ನಷ್ಟ ಎಂದು ಜ.ಇ.ಹಿಂದ್ ಮಂಗಳೂರು ವಲಯ ಸಂತಾಪ ಸೂಚಿಸಿದೆ.


ನಯ-ವಿನಯದ ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಅವರು, ಜಮಾಅತೆ ಇಸ್ಲಾಮೀ ಆಯೋಜಿಸಿದ ಕೋಮು ಸೌಹಾರ್ದ ಅಭಿಯಾನ ಹಾಗೂ ಧಾರ್ಮಿಕ ಸೌಹಾರ್ದ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್. ಯು. ತಿಳಿಸಿದ್ದಾರೆ.


ಮಂಗಳೂರು ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿ ಸಂತಾಪ ಸೂಚಿಸಿದ್ದು, ಜಮಾಅತೆ ಇಸ್ಲಾಮೀ ಹಿಂದ್ ನ ಧಾರ್ಮಿಕ ಸೌಹಾರ್ದ ಅಭಿಯಾನದ ಸಂದರ್ಭದಲ್ಲಿ ಅಭಿಯಾನದ ಯಶಸ್ವಿಗೆ ನೀಡಿದ ಸೇವೆ ಮರೆಯಲಾಗದ್ದು. ಧರ್ಮ ಸಮನ್ವಯ ಎಂಬ ವೇದಿಕೆಯ ಮೂಲಕ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ‌ ಮಧ್ಯೆ ಸೌಹಾರ್ದತೆಗಾಗಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಶಾಂತಿ ಪ್ರಕಾಶನದ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿಸುತ್ತಿದ್ದರು. ಅವರ ನಿಧನವು ಜಿಲ್ಲೆಯ ಧಾರ್ಮಿಕ ಸೌಹಾರ್ದದ ಕೊಂಡಿ ಕಳಚಿಕೊಂಡಂತಾಗಿದೆ ಎಂದು ಹೇಳಿದ್ದಾರೆ.


ಅಲ್ಲದೇ ಇವರ ಅಗಲಿಕೆಗೆ ಧಾರ್ಮಿಕ ಸೌಹಾರ್ದ ಅಭಿಯಾನದ ಸಂಚಾಲಕರಾಗಿದ್ದ ಕೆ.ಎಂ.ಶರೀಫ್, ಮಂಗಳೂರು ವಲಯ ಸಂಚಾಲಕ ಜಅಬ್ದುಸ್ಸಲಾಮ್. ಯು. ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್, ದ.ಕ.ಜಿಲ್ಲಾ ಸಂಚಾಲಕ ಸಈದ್ ಇಸ್ಮಾಯಿಲ್, ಸಾರ್ವಜನಿಕ ಸಂಪರ್ಕ ಸಂಚಾಲಕ ಅಮೀನ್ ಅಹ್ಸನ್, ಮಂಗಳೂರು ನಗರ ಸ್ಥಾನೀಯ ಅಧ್ಯಕ್ಷ ಕೆ.ಎಂ.ಅಶ್ರಫ್, ಸನ್ಮಾರ್ಗ ವಾರಪತ್ರಿಕೆ ಸಂಪಾದಕ ಅಬ್ದುಲ್ ಕಾದರ್ ಕುಕ್ಕಿಲ ಹಾಗೂ ಅನುಪಮ ಮಹಿಳಾ ಮಾಸಿಕದ ಸಂಪಾದಕಿ ಶಹನಾಝ್ ಎಂ.ಅಗಾಧ ಶೋಕ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article