ಕೊರೋನಾ ಸೋಂಕಿನ ಮೂರನೇ ಅಲೆಯ ಭೀತಿಯಲ್ಲಿ ಇರುವ ಜನರಿಗೆ ಒಂದು ಸಂತಸದ ಸುದ್ದಿ ಬಂದಿದೆ. ಈಗಾಗಲೇ ಲಾಕ್‌ಡೌನ್ ಸಂಕಷ್ಟದಿಂದ ಕಂಗೆಟ್ಟಿರುವ ಜನರು ಈ ಸುದ್ದಿಯಿಂದ ನಿರಾಳವಾಗಲಿದ್ದಾರೆ.
ಕೋರೋನಾ ಮೂರನೇ ಅಲೆ ಎರಡನೇ ಅಲೆಯಷ್ಟು ತೀವ್ರವಾಗಿರುವುದಿಲ್ಲ ಎಂದು ವೈದ್ಯಕೀಯ ಮಂಡಳಿ ಹೇಳಿದೆ. ಕೊರೋನಾ ಲಸಿಕೆ ಅಭಿಯಾನ ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದು, ಇದು ಮುಂದುವರಿಯುತ್ತದೆ. ಅದೇ ರೀತಿ, ಈಗಾಗಲೇ ಎರಡನೇ ಮತ್ತು ಮೊದಲ ಅಲೆಯಲ್ಲಿ ಸಾಕಷ್ಟು ಮಂದಿಗೆ ಸೋಂಕು ತಗುಲಿರುವುದರಿಂದ ಮೂರನೇ ಅಲೆ ಅಷ್ಟು ಬೇಗ ಸೋಂಕಿತರಿಗೆ ತೊಂದರೆಯಾಗದು ಎಂದು ವೈದ್ಯಕೀಯ ಮಂಡಳಿ ತಿಳಿಸಿದೆ.
ಈಗಾಗಲೇ ಸೋಂಕಿತರ ದೇಹದಲ್ಲಿ ಪ್ರತಿಕಾಯ ಶಕ್ತಿ ಸೃಷ್ಟಿಯಾಗಿದೆ. ಇದರ ಜೊತೆ, ಸೋಂಕಿತರಲ್ಲದವರಿಗೆ ಲಸಿಕೆ ನೀಡಿರುವುದರಿಂದ ಪ್ರತಿರೋಧ ಶಕ್ತಿ ಪ್ರಬಲವಾಗಿರುತ್ತದೆ. ಇದರಿಂದ ಮೂರನೇ ಅಲೆಯು ಅಷ್ಟೊಂದು ಭೀಕರವಾಗಿರುವ ಸಾಧ್ಯತೆ ಇಲ್ಲ ಎಂದು ಅದು ತನ್ನ ವರದಿಯಲ್ಲಿ ಹೇಳಿದೆ.
ಆದರೆ, ಮಾಸ್ಕ್ ಧರಿಸುವುದು ಮತ್ತು ಲಸಿಕೆ ಅಭಿಯಾನವನ್ನು ಇನ್ನಷ್ಟು ವೇಗವಾಗಿ ಮಾಡುವುದು ಕೊರೋನಾ ಮೂರನೇ ಅಲೆಯ ಭೀತಿಯನ್ನು ಮತ್ತಷ್ಟು ತಗ್ಗಿಸಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ಡೆಲ್ಟ ಪ್ಲಸ್ ಪ್ರಸರಣ ತೀವ್ರತೆ ಹೆಚ್ಚು
ಕೊರೋನಾ ಡೆಲ್ಟ ಪ್ಲಸ್ ಈವರೆಗೆಇನ ಅತ್ಯಂತ ವೇಗವಾಗಿ ಹೆಚ್ಚು ಮಂದಿಗೆ ಹರಡುವ ರೂಪಾಂತರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇದೊಂದು ಕಳವಳಕಾರಿ ರೂಪಾಂತರಿಯಾಗಿದೆ. ಅಲ್ಲದೆ, 85 ದೇಶಗಳಲ್ಲಿ ಈ ರೋಗ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಲಸಿಕೆ ಪಡೆಯದವರಿಗೆ ಮತ್ತು ಸೋಂಕು ತಗಲದವರಿಗೆ ಅಪಾಯಕಾರಿಯಾಗಲಿದೆ ಎಂದು ಅದು ಹೇಳಿದೆ.
ದೇಶದಲ್ಲೂ ಡೆಲ್ಟ ಪ್ಲಸ್ ಈಗಾಗಲೇ ಹಲವೆಡೆ ಪತ್ತೆಯಾಗಿದ್ದು, ತಮಿಳುನಾಡಿನಲ್ಲಿ ಇದು ಮೊದಲ ಬಲಿ ಪಡೆದುಕೊಂಡಿದೆ.
ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ಜಮ್ಮು ಕಾಶ್ಮೀರ, ತಮಿಳುನಾಡು ಮತ್ತು ಪಂಜಾಬ್‌ಗಳಲ್ಲಿ ಡೆಲ್ಟ ಪ್ಲಸ್ ಪ್ರಕರಣಗಳು ದಾಖಲಾಗಿದೆ.


