ಸಾಮಾಜಿಕ ತಾಣದಲ್ಲಿ ತುಳು ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎನ್ನಲಾದ ಕಿಡಿಗೇಡಿಯನ್ನು ಮಂಗಳೂರು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
ಬೆಂಗಳೂರಿಗೆ ತೆರಳಿ ಆರೋಪಿಯನ್ನು ಬಂಧಿಸಿರುವ ಮಂಗಳೂರು ಪೊಲೀಸರು ಮಂಗಳೂರಿನಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
ತುಳು ನಾಡಿನ ಧ್ವಜಕ್ಕೆ ಅವಮಾನ ಮಾಡಿದ ಬಗ್ಗೆ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಮುಖಂಡ ಶಶಿಧರ್ ಹೆಗ್ಡೆ ದೂರು ನೀಡಿದ ಬೆನ್ನಲ್ಲೇ ಬರ್ಕೆ ಮತ್ತು ಉರ್ವ ಠಾಣಾ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದ್ದಾರೆ.
ಸೂರ್ಯ ಎನ್. ಕೆ. ಎಂಬಾತ ಬಂಧಿತ ಆರೋಪಿ. ಪಾದರಕ್ಷೆಯಲ್ಲಿ ತುಳುನಾಡಿನ ಬಾವುಟವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮಾರಟಕ್ಕಿದೆ ಎಂಬರ್ಥದಲ್ಲಿ ಶೇರ್ ಮಾಡಿಕೊಂಡಿದ್ದ. ಅಲ್ಲದೆ, 'ಇವತ್ತು ತುಳುನಾಡ ಚಪ್ಪಲ್ ಬಂದಿದೆ. ನಾಳೆ ಬಿಕಿನಿಯೂ ಬರಬಹುದು. ಹಾಕಿಕೊಂಡು ಮಜಾ ಮಾಡಿ' ಎಂದು ಆಕ್ಷೇಪಾರ್ಹ ಸಂದೇಶವನ್ನು ಪೋಸ್ಟ್ ಮಾಡಿದ್ದಾನೆ.
ಈ ಆಕ್ಷೇಪಾರ್ಹ ಸಂದೇಶದ ವಿರುದ್ಧ ನೀಡಲಾದ ದೂರಿನನ್ವಯ ತಕ್ಷಣ ಕ್ರಮಕೈಗೊಂಡ ಬರ್ಕೆ ಹಾಗೂ ಉರ್ವ ಠಾಣಾ ಪೊಲೀಸರು, ಬೆಂಗಳೂರಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.

