ವ್ಯಾಪಕ ಮಳೆ ಹಾಗೂ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿ ನಡೆದಿದೆ.
ನೆರಿಯ ಗ್ರಾಮದ ಅಣಿಯೂರುನಿಂದು ಕಾಟಾಜೆ , ಪರ್ಪಳಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ಕಳೆದ ಎಪ್ರಿಲ್ ನಿಂದ ನಡೆಯುತ್ತಿದೆ. ಈ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬಗಳು ಸೇರಿದಂತೆ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಗಳ ವಿದ್ಯುತ್ ಪೂರೈಕೆ ಕಂಬಗಳು ಇದೆ. ಇಲ್ಲಿ ವಿದ್ಯುತ್ ಕಂಬಗಳ ಬುಡವನ್ನು ಕೊರೆದು ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಸಲಾಗಿತ್ತು.
ಕಳೆದ ಒಂದು ವಾರದಿಂದ ವ್ಯಾಪಕ ಮಳೆಯಿಂದಾಗಿ ವಿದ್ಯುತ್ ಕಂಬಗಳ ಬುಡದಲ್ಲಿ ಮಣ್ಣು ಸವೆದು ನಿನ್ನೆ ರಾತ್ರಿ ಯೆನಪೋಯ ವಿದ್ಯುತ್ ಉತ್ಪಾದನಾ ಘಟಕಕ್ಕೆ ಸೇರಿದ 8 ವಿದ್ಯುತ್ ಕಂಬಗಳು ರಸ್ತೆಯ ಮೇಲೆ ಉರುಳಿ ಬಿದ್ದಿದೆ.
ಇಲ್ಲಿ ಇನ್ನಷ್ಟು ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಹೇಳುತ್ತಾರೆ. ಈ ಭಾಗದಲ್ಲಿ ರಬ್ಬರ್, ಅಡಿಕೆ ತೋಟಗಳಲ್ಲಿ ಗಾಳಿ ಮಳೆಗೆ ವ್ಯಾಪಕ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕೇಬಲ್ ಅಳವಡಿಸಿದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.



 
 
 
 
 
 
 
 
 
 
 
 
 
 
 
 
 
