ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಹಾಗೂ ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಕುಟುಂಬದ ಆರು ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ದೂರು ನೀಡಲಾಗಿದೆ ಎಂದು ವರದಿಯಾಗಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಎಂಬವರು ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ಜಾರಿ ನಿರ್ದೇಶನಾಲಯಕ್ಕೆ ಲಿಖಿತ ದೂರು ನೀಡಿದ್ದು, 2020ರ ನವೆಂಬರ್ 27ರಂದು ದೂರು ಸ್ವೀಕರಿಸಲಾಗಿದೆ ಎಂದು ಇಡಿ ಮೂಲಗಳು ಹೇಳಿವೆ.
ಮೊದಲ ಆರೋಪಿಯಾಗಿ ಸಿಎಂ ಯಡಿಯೂರಪ್ಪ, ಎರಡನೆ ಆರೋಪಿಯಾಗಿ ಬಿ. ವೈ. ವಿಜಯೇಂದ್ರ, ಮೂರನೇ ಆರೋಪಿಯಾಗಿ ಮೊಮ್ಮಗ ಶಶಿಧರ್ ಮರಡಿ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಅಬ್ರಹಾಂ ದೂರು ನೀಡಿದ್ದಾರೆ.
ಹಣ ವರ್ಗಾವಣೆ ಬಗ್ಗೆ ಡೆವೆಲಪರ್ ಚಂದ್ರಕಾಂತ್ ರಾಮಲಿಂಗಂ ಜೊತೆ ಶಶಿಧರ್ ಮರಡಿ ನಡೆಸಿರುವ ವಾಟ್ಸಾಪ್ ಸಂಭಾಷಣೆಯನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಿಎಂಎಲ್ ಎ ಅಡಿ ಪ್ರಕರಣ ದಾಖಲಿಸುವಂತೆ ದೂರುದಾರರು ಮನವಿ ಮಾಡಿದ್ದಾರೆ. ದೂರನ್ನು ಪರಿಗಣಿಸಿ ಪ್ರಕರಣ ದಾಖಲಿಸಿಕೋಮಡ ಜಾರಿ ನಿರ್ದೇಶನಾಲಯ, ಮುಖ್ಯಮಂತ್ರಿ ಬಿಎಸ್ ವೈ ಹಾಗೂ ಕುಟುಂಬದ ವಿರುದ್ಧ ವಿಚಾರಣೆ ಕೈಗೆತ್ತಿಕೊಳ್ಳಲಿದ್ದು, ಇದು ಬಿಎಸ್‌ವೈಗೆ ಪ್ರಸಕ್ತ ಪರಿಸ್ಥಿತಿಯಲ್ಲಿ ದೊಡ್ಡ ಕಾನೂನು ಕಗ್ಗಂಟಾಗಿ ಪರಿಣಮಿಸುವ ಸಾಧ್ಯತೆ ಇದೆ.
ರಾಜ್ಯ ಬಿಜೆಪಿಯಲ್ಲಿ ಸಿಎಂ ಸ್ಥಾನಕ್ಕೆ ಏರಲು ಹಲವರು ಯಡಿಯೂರಪ್ಪ ವಿರುದ್ಧ ಹೊಂಚು ಹಾಕುತ್ತಿದ್ದಾರೆ. ಬಿಎಸ್‌ವೈ ಅವರನ್ನು ಕೆಳಗಿಳಿಸಲು ಈಗಾಗಲೇ ಭಾರೀ ಕಸರತ್ತುಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ, ಇಡಿ ವಿಚಾರಣೆಯ ಸಂಕಷ್ಟ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕುತ್ತಾಗಲಿದೆ.
ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇ ಬೇಕು ಎನ್ನುವಂತಹ ಯಡಿಯೂರಪ್ಪ ಅವರಿಗೆ ಬರುತ್ತದೆಯೇ ಎನ್ನುವ ಅನುಮಾನಗಳು ಸೃಷ್ಟಿಯಾಗಿವೆ.

